ಸಾರಾಂಶ
ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅನ್ನಭಾಗ್ಯ ಪಡಿತರ ವಿತರಣೆಯ ವೇಳೆ ತೂಕದಲ್ಲಿ ಮೋಸ ಮಾಡುತ್ತಿದ್ದು, ಅವರ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಆಹಾರ ನಿರೀಕ್ಷಕರಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅನ್ನಭಾಗ್ಯ ಪಡಿತರ ವಿತರಣೆಯ ವೇಳೆ ತೂಕದಲ್ಲಿ ಮೋಸ ಮಾಡುತ್ತಿದ್ದು, ಅವರ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಆಹಾರ ನಿರೀಕ್ಷಕರಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕುಷ್ಟಗಿ ತಾಲೂಕಿನ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ನಡೆಯುತ್ತಿದೆ. ಸಮರ್ಪಕವಾಗಿ ಪಡಿತರ ಹಂಚಿಕೆಯಾಗುತ್ತಿಲ್ಲ, ಸಮಯಕ್ಕೆ ಸರಿಯಾಗಿ ನ್ಯಾಯಬೆಲೆ ಅಂಗಡಿ ತೆರೆಯುತ್ತಿಲ್ಲ ಸೇರಿದಂತೆ ಅನೇಕ ದೂರು ಬಂದಿದ್ದು, ಆಹಾರ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯದ ಹಣ ಎಲ್ಲರಿಗೂ ತಲುಪಿಸುವಂತಹ ಕಾರ್ಯ ಮಾಡಬೇಕು ಎಂದರು.ಗೃಹಲಕ್ಷ್ಮೀ ಯೋಜನೆ ಸ್ಥಗಿತಗೊಂಡಿಲ್ಲ. ಅಂಗನವಾಡಿ ಇಲಾಖೆಯ ಕಾರ್ಯಕರ್ತೆಯರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಸಿಡಿಪಿಒ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವ ಮೂಲಕ ಸುಳ್ಳು ಸುದ್ದಿ ಹರಡುವುದನ್ನು ತಡೆಯಬೇಕು ಎಂದರು.
ತಾಪಂ ಇಒ ಪಂಪಾಪತಿ ಹಿರೇಮಠ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾಗಿದ್ದು, ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ವ್ಯವಸ್ಥೆಯಾಗಬೇಕು ಎಂದರು.ಕೆಕೆಆರ್‌ಟಿಸಿ ಕುಷ್ಟಗಿ ಡಿಪೋ ಮ್ಯಾನೇಜರ್ ಸುಂದರಗೌಡ ಪಾಟೀಲ, ಕೆಇಬಿ ಎಇಇ ಕೆಂಚಪ್ಪ ಬಾವಿಮನಿ, ಆಹಾರ ನಿರೀಕ್ಷಕಿ ಮಂಜುಳಾ, ಸಿಡಿಪಿಒ ಯಲ್ಲಮ್ಮ ಹಂಡಿ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಫಾರೂಕ್ ಡಾಲಾಯತ್, ಜಿಲ್ಲಾ ಸಮಿತಿ ಸದಸ್ಯರಾದ ಶಾರದಾ ಕಟ್ಟಿಮನಿ, ಮಲ್ಲಪ್ಪ ಭಂಡಾರಿ ಸೇರಿದಂತೆ ನಾಮನಿರ್ದೇಶಿತ ಸದಸ್ಯರು, ತಾಪಂ ಸಿಬ್ಬಂದಿ ಇದ್ದರು.