ಕಾಲಮಿತಿಯಲ್ಲಿ ಅನುದಾನ ಖರ್ಚು ಮಾಡಲು ಸೂಚನೆ

| Published : Sep 28 2024, 01:30 AM IST / Updated: Sep 28 2024, 01:31 AM IST

ಸಾರಾಂಶ

ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಕಾಲಮಿತಿಯಲ್ಲಿ ಖರ್ಚು ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಕಾಲಮಿತಿಯಲ್ಲಿ ಖರ್ಚು ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪ್ರಧಾನ ಮಂತ್ರಿಗಳ 15 ಹೊಸ ಅಂಶಗಳ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು. ಅನುದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಜಾಗೃತಿಗಾಗಿ ವಿವಿಧ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಯೋಜನೆಗಳಿಗೆ ಹೆಚ್ಚೆಚ್ಚು ಬೇಡಿಕೆ ಬರುವಂತೆ ಮಾಡಲು ತಿಳಿಸಿದರು. ಯೋಜನೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯದ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪ್ರಸಕ್ತ ಸಾಲಿಗೆ 8675 ಗುರಿಗೆ 1301 ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಐಸಿಡಿಎಸ್ ಯೋಜನೆಯಡಿ ಶೇ.94 ರಷ್ಟು, ಭಾಗ್ಯಲಕ್ಷ್ಮೀ ಯೋಜನೆಯಡಿ ಶೇ.51ರಷ್ಟು, ಮಾತೃವಂದನಾ ಯೋಜನೆಯಡಿ ಶೇ.48 ರಷ್ಟು ಪ್ರಗತಿ ಸಾಧಿಸಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಪಶು ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹೆಚ್ಚಿಗೆ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು.

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಆರ್ಥಿಕ ಶೇ.72ರಷ್ಟು, ಭೌತಿಕ ಶೇ.62 ಪ್ರಗತಿ ಸಾಧಿಸಿದರೆ, ಜಿಲ್ಲಾ ವಿಕಲಚೇತನ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳ ಪೈಕಿ 1906 ಗುರಿಗೆ 286 ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗಿದೆ. ಸ್ವಯಂ ಉದ್ಯೋಗ ಕಾರ್ಯಕ್ರಮ ವ್ಯಯಕ್ತಿಕ ಸಾಲ ಸೌಲಭ್ಯದಡಿ ಆರ್ಥಿಕ ಶೇ.80, ಭೌತಿಕ ಶೇ.80ರಷ್ಟು ಪ್ರಗತಿ ಸಾಧಿಸಲಾಗಿದೆ. ಸ್ವಯಂ ಉದ್ಯೋಗ ಕಾರ್ಯಕ್ರಮ ಗ್ರಾಮಾಂತರ ತರಬೇತಿಯಡಿ 1220 ಗುರಿಗೆ 183 ಮೀಸಲಿರಿಸಿದ್ದು, ಶೇ.51.91ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪುನೀತ್, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿವೇಕಾನಂದ ಸೇರಿದಂತೆ ಇತರೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

-------------

ಕೋಟ್‌.......

ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಆರ್ಥಿಕ ಶೇ.72ರಷ್ಟು, ಭೌತಿಕ ಶೇ.62 ಪ್ರಗತಿ ಸಾಧಿಸಿದರೆ, ಜಿಲ್ಲಾ ವಿಕಲಚೇತನ ಇಲಾಖೆಯಿಂದ ನೀಡಲಾಗುವ ವಿವಿಧ ಯೋಜನೆಗಳ ಪೈಕಿ 1906 ಗುರಿಗೆ 286 ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗಿದೆ.

- ಶಶಿಧರ ಕುರೇರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ