ಸಾರಾಂಶ
ಸರಕಾರದ ನಿಯಮದಂತೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಟ್ಟೀಹಳ್ಳಿ: ಸರಕಾರದ ನಿಯಮದಂತೆ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಹೆಸ್ಕಾಂ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಬೇಸಿಗೆ ಆರಂಭವಾಗುತ್ತಿದ್ದು, ರೈತರಿಗೆ ಅನಾನುಕೂಲವಾಗದಂತೆ ಹೆಸ್ಕಾಂ ಇಲಾಖೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು, ಕಚೇರಿಗೆ ಬರುವ ಸಾರ್ವಜನಿಕರು, ರೈತರೊಂದಿಗೆ ಅಧಿಕಾರಿಗಳು ಲೈನ್‌ಮನ್‌ಗಳು ಸೌಜನ್ಯದಿಂದ ವರ್ತಿಸಬೇಕು, ತಾಲೂಕಿನ ಎಲ್ಲ ಗ್ರೀಡ್‌ಗಳಲ್ಲಿ ಸಾರ್ವಜನಿಕರೊಂದಿಗೆ ಹಾಗೂ ರೈತರೊಂದಿಗೆ ಸಭೆಗಳನ್ನು ನಡೆಸಿ ಅವರ ಕುಂದು ಕೊರತೆಗಳನ್ನು ಬಗೆ ಹರಿಸಬೇಕು ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು, ಯಾವುದೇ ತೊಂದರೆಗಳಾದಲ್ಲಿ ಆಯಾ ಹೆಸ್ಕಾಂ ಅಧಿಕಾರಿಗಳೆ ನೇರ ಹೊಣೆಗಾರರಾಗುತ್ತಾರೆ ಎಂದರು.ಪ್ರಸ್ತುತ ವರ್ಷದ ಬೇಸಿಗೆ ಆರಂಭವಾಗುತ್ತಿದ್ದು, ರಟ್ಟೀಹಳ್ಳಿ-ಹಿರೇಕೆರೂರ ತಾಲೂಕುಗಳಲ್ಲಿ ಲೋಡ್ ಶೆಡ್ಡಿಂಗ್ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಹುಲ್ಲತ್ತಿ, ಕುಡುಪಲಿ, ಹಂಸಭಾವಿ ಗ್ರಾಮಗಳನ್ನು ನೂತನ ಗ್ರೀಡ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳು ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಅದೇ ರೀತಿ ಹಳ್ಳೂರ, ಗುಡ್ಡದಮಾದಾಪುರ, ನಿಟ್ಟೂರ, ತಡಕನಹಳ್ಳಿ, ನಿಡನೇಗಿಲ ಗ್ರಾಮಗಳಲ್ಲಿ ನೂತವಾಗಿ ಗ್ರೀಡ್‌ಗಳ ಆರಂಭಕ್ಕೆ ಪ್ರಾಮಾಣಿಕವಾಗಿ ಪ್ರಯತ್ನೀಸುತ್ತೇನೆ ಎಂದರು.ಹೆಸ್ಕಾಂ ಅಧಿಕಾರಿ ಪ್ರಭಾಕರ್, ನಾಗಪ್ಪ, ಸುಜೀತ್‌ಕುಮಾರ, ರಟ್ಟೀಹಳ್ಳಿ ಎಇಇ ರಾಜೀವ ಮರಿಗೌಡರ, ನಾಗರಾಜ ಸೋಮಕ್ಕಳವರ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್ಐ ಕೃಷ್ಣಪ್ಪ ತೋಪಿನ್, ಸಂಜೀವ ನೀರಲಗಿ, ಹಾಗೂ ತಾಲೂಕಿನ ಹೆಸ್ಕಾಂ ಅಧಿಕಾರಿಗಳು ಇದ್ದರು.