ಹಕ್ಕುಪತ್ರ ವಿತರಣೆ ಗುರಿ ತಲುಪಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೂಚನೆ

| Published : Oct 09 2024, 01:33 AM IST

ಹಕ್ಕುಪತ್ರ ವಿತರಣೆ ಗುರಿ ತಲುಪಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

Notice to the Slum Development Board to reach the target of distribution of rights

-ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

-----

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದಲ್ಲಿ ಒಟ್ಟು18 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕೊಳಚೆ ಪ್ರದೇಶಗಳಲ್ಲಿ 12 ಘೋಷಿತ ಕೊಳಚೆ ಪ್ರದೇಶಗಳಾಗಿವೆ. ಇನ್ನುಳಿದ 6 ಪ್ರದೇಶಗಳನ್ನು ಕೊಳಚೆ ಪ್ರದೇಶಗಳನ್ನಾಗಿ ಘೋಷಿಸಲು ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಘೋಷಿತ 10 ಕೊಳಚೆ ಪ್ರದೇಶಗಳಲ್ಲಿ ಈ ಹಿಂದೆ ನೀಡಿರುವ ಹಕ್ಕು ಪತ್ರಗಳನ್ನು ಮರು ಪರಿಶೀಲಿಸಿ ಹಾಗೂ ಹಂಚಿಕೆ ಮಾಡಲು ಬಾಕಿ ಇರುವ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ನಗರಸಭೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮರು ಸಮೀಕ್ಷೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಕ್ಟೋಬರ್ ಒಳಗಾಗಿ 1000 ಹಕ್ಕುಪತ್ರ ವಿತರಿಸುವ ಗುರಿ ಪೂರ್ಣಗೊಳಿಸುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಲಾಯಿತು. ನಗರ ಸಭೆಯ ವ್ಯಾಪ್ತಿಯಲ್ಲಿ ಖಾತೆ ಇಲ್ಲದೆ ನಿರ್ಮಿಸಿಕೊಂಡು ಮನೆ, ಗುಡಿಸಲು ವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಹಕ್ಕುಪತ್ರ ನೀಡಿ ಖಾತೆ ತೆರೆಯುವಂತೆ ಸಚಿವರು ಸೂಚಿಸಿದರು.

ಈ ಹಿಂದೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಹಕ್ಕುಪತ್ರ ನೀಡಿರುವ ಬಗ್ಗೆ ವಿವರಣೆ ನೀಡುವಂತೆ ಅಭಿಯಂತರರನ್ನು ಸಚಿವರು ಪ್ರಶ್ನಿಸಿದರು. ಸಚಿವರಿಗೆ ಉತ್ತರಿಸಿದ ಅಭಿಯಂತರರು ನಗರದ ಗೋಪಾಲಪುರ ಬಡಾವಣೆಯ ಘೋಷಿತ ಕೊಳಚೆ ಪ್ರದೇಶದಲ್ಲಿ 50-60 ಹಕ್ಕುಪತ್ರಗಳನ್ನು ಹೆಚ್ಚುವರಿಯಾಗಿ ಹಿಂದಿನ ಶಾಸಕರ ಸೂಚನೆಯಂತೆ ನೀಡಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಸಿ ಘೋಷಿತ ಪ್ರದೇಶವನ್ನು ಹೊರತುಪಡಿಸಿ ಹಕ್ಕುಪತ್ರ ನೀಡಿರುವುದು ಕಾನೂನು ಬಾಹಿರ. ಕಾನೂನು ರೀತಿ ಲಭ್ಯವಿರುವ ಪ್ರದೇಶದ ಮರು ಸರ್ವೆ ಕೈಗೊಂಡು 20 ದಿನದೊಳಗಾಗಿ ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶವಾಸಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರ ನೀಡಲು ಪೌರಾಯುಕ್ತರು, ಕೊಳಚೆ ನಿರ್ಮೂಲನ ಮಂಡಳಿ ತುರ್ತು ಕ್ರಮವಹಿಸಬೇಕು ಎಂದರು.

ಈ ಕಾರ್ಯದ ಮೇಲುಸ್ತುವಾರಿಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರವರಿಗೆ ವಹಿಸಿ ಹಕ್ಕುಪತ್ರ ವಿತರಿಸುವ ಸಂಬಂಧ ಪ್ರಗತಿ ಸಾಧಿಸುವಂತೆ ಆದೇಶಿಸಿದರು.

ನಗರಸಭೆ ನಗರ ವಸತಿ ಯೋಜನೆಯ ಕೆಎಂ. ಕೊಟ್ಟಿಗೆಯಲ್ಲಿ 624 ಜಿ+2 ಗುಂಪು ಮನೆಗಳ ನಿರ್ಮಾಣ ಹಾಗೂ ಲಕ್ಕವ್ವನಹಳ್ಳಿ ರಿ.ಸ.ನಂ-531 ರಲ್ಲಿ 21.09 ಎಕರೆ ಲಭ್ಯವಿದ್ದು ಈ ಜಮೀನಿನಲ್ಲಿ 1248 ಜಿ+2 ಗುಂಪು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸದರಿ ಯೋಜನೆಗಳಲ್ಲಿ 624 ಮನೆಗಳಲ್ಲಿ 384 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿರುತ್ತವೆ. ಯೋಜನೆಯ ಫಲಾನುಭವಿಗಳಿಂದ ವಂತಿಕೆ ಸಂಗ್ರಹಣೆ ಪೂರ್ಣಗೊಳಿಸಿದಲ್ಲಿ ಡಿಸೆಂಬರ್ ಒಳಗೆ 384 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಬಹುದು ಎಂದು ರಾಜೀವ್ ಗಾಂಧಿ ವಸತಿ ನಿಗಮದ ಸಿಬ್ಬಂದಿ ತಿಳಿಸಿದರು.

ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ ಮಾಡದೇ ಇರುವುದರಿಂದ ಫಲಾನುಭವಿಗಳಿಗೆ ಅನಾನುಕೂಲವಾಗಿದ್ದು, ಈಗಾಗಲೇ ಮಂಡಳಿಯಿಂದ ಎಷ್ಟು ಮನೆಗಳಿಗೆ ಮಂಜೂರಾತಿ ಪಡೆಯಲಾಗಿದೆ, ಎಷ್ಟು ಮನೆ ಪೂರ್ಣಗೊಳಿಸಲಾಗಿದೆ, ಪ್ರಗತಿಯಲ್ಲಿರುವ ಮನೆಗಳು, ಪ್ರಾರಂಭಿಸಬೇಕಾಗಿರುವ ಮನೆಗಳು ನಿಖರ ಮಾಹಿತಿ ನೀಡುವಂತೆ ಹಾಗೂ ಬಾಕಿ ಇರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಅಭಿಯಂತರರಾದ ನಿಶಾಂತ್ ಅವರಿಗೆ ಸೂಚಿಸಲಾಯಿತು.

ವಿಷಯಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳು 63,000ರು. ಮುಂಗಡ ವಂತಿಕೆ ಪಾವತಿಸಬೇಕಾಗಿದ್ದು, ಉಳಿದ ಮೊತ್ತವನ್ನು ಬ್ಯಾಂಕ್ ಸಾಲ ಸೌಲಭ್ಯದ ರೂಪದಲ್ಲಿ ಹೊಂದಾಣಿಕೆ ಮಾಡಬೇಕಾಗಿರುವುದರಿಂದ ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ರು. 80,000 ದಿಂದ 1,20,000 ರು. ಇರುವ ಆದಾಯ ಪ್ರಮಾಣ ಪತ್ರವನ್ನು ನೀಡುವಂತೆ ಕೋರಿದ್ದರ ಪ್ರಯುಕ್ತ ಈ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ತಾಲೂಕು ಕಛೇರಿ ಮತ್ತು ನಗರಸಭೆಗಳು ವಿಶೇಷ ಅಭಿಯಾನವನ್ನು ಆಯೋಜಿಸಿ ಆದಾಯ ಪ್ರಮಾಣ ಪತ್ರಗಳನ್ನು ನೀಡಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

.....ಬಾಕ್ಸ್ ......

ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಯೋಜಿಸಲಾಗಿರುವ ಹನಿ ನೀರಾವರಿ ಪ್ಯಾಕೇಜ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ರಗತಿ ಹಾಗೂ ಯೋಜಿಸಲಾದ ಹನಿ ನೀರಾವರಿ ಪ್ಯಾಕೇಜ್ ಕಾಮಗಾರಿಗಳ ಪ್ರಗತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದರು. ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಿಇಒ ಎಸ್.ಜೆ.ಸೋಮಶೇಖರ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

----

ಫೋಟೊ: ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು.