ಎಸ್ಸಿ, ಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸಭೆಗೆ ಗೈರಾದವರಿಗೆ ನೊಟೀಸ್

| Published : Jul 12 2024, 01:35 AM IST

ಸಾರಾಂಶ

ತರೀಕೆರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೊಟೀಸ್ ನೀಡಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಸೂಚಿಸಿದರು.

ತಹಸೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೊಟೀಸ್ ನೀಡಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಸೂಚಿಸಿದರು.

ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ತರೀಕೆರೆ ಉಪ ವಿಭಾಗದ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆ ಪ್ರಾರಂಭದಲ್ಲಿ ಅಧಿಕಾರಿಗಳ ಹಾಜರಾತಿ ಪರಿಶೀಲಿಸುವಾಗ ಅಧಿಕಾರಿಗಳ ಗೈರು ಹಾಜರಿ ಕಂಡು ಅಂತಹವರಿಗೆ ನೋಟಿಸ್ ನೀಡಬೇಕೆಂದು ಆದೇಶಿಸಿದರು.

ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ಕೆ.ಸ್ವಾಮಿ ಮಾತನಾಡಿ ಎಚ್.ರಂಗಾಪುರ ಸ.ನಂ.13ರಲ್ಲಿ ಹಿಂದಿನಿಂದಲೂ ಸ್ಮಶಾನಕ್ಕಾಗಿ ಉಪಯೋಗಿಸಿಕೊಂಡು ಬರುತ್ತಿರುವ ಜಾಗ ವಿನಾಕಾರಣ ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಿದ್ದಾರೆ. ಸದರಿ ಜಾಗವನ್ನು ಸ್ಮಶಾನಕ್ಕೆ ಕಾದಿರಿಸಬೇಕು ಎಂದು ತಿಳಿಸಿದರು. ಸಂಬಂದಿಸಿದ ಜಾಗಕ್ಕೆ ಶೀಘ್ರ ಭೇಟಿ ಮಾಡಿ ಜಂಟಿ ಸರ್ವೆ ನಡೆಸಿ, ಸ್ಥಳ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು ಎಂದು ಉಪವಿಬಾಗಾಧಿಕಾರಿ ಹೇಳಿದರು.ಪಟ್ಟಣದ ಸುಂದರೇಶ್ ಬಡಾವಣೆಯಲ್ಲಿ ಕೆರೆ ಜಾಗ ಒತ್ತುವರಿಯಾಗಿದ್ದು, ಈ ವಿಷಯ ಸಭೆಯಲ್ಲಿ ಚರ್ಚಿಸಲಾಗಿ ಕೂಡಲೇ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕೆರೆ ಒತ್ತುವರಿ ಜಾಗ ಪರಿಶೀಲಿಸಿ ಕೆರೆ ಒತ್ತುವರಿಯನ್ನು ಖುಲ್ಲಾ ಪಡಿಸುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದರು. ಪಟ್ಟಣದ ಹೃದಯ ಭಾಗದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ವ್ಯವಸ್ಥೆ ಇಲ್ಲದ ಕಾರಣ ಪರ್ಯಾಯ ದಾರಿಗಾಗಿ ನಕಾಶೆ ಸಿದ್ದಪಡಿಸಿ ಪುರಸಭೆ ನಿಧಿಯಿಂದ ರಸ್ತೆ ವ್ಯವಸ್ಥೆ ಮಾಡುವ ಕುರಿತು ಸರ್ವೆ ಕಾರ್ಯ ಮುಂದುವರಿಸಬೇಕಾಗಿ ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ಕೆ.ಸ್ವಾಮಿ ಒತ್ತಾಯಿಸಿದರು.

ಮುಖಂಡ ಕೆ.ನಾಗರಾಜ್ ಮಾತನಾಡಿ ಲಿಂಗದಹಳ್ಳಿ ಹೋಬಳಿ ಕಲ್ಲಾಳು ಗ್ರಾಮದ ಸ.ನಂ,6 ರಲ್ಲಿ ಫಲಾನುಭವಿ ಓರ್ವರಿಗೆ ತಹಸೀಲ್ದಾರ್ ಸ್ವಾಧೀನ ಬಿಡಿಸಿಕೊಟ್ಟಿದ್ದು, ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು. ಅಜ್ಜಂಪುರ ತಾಲೂಕಿನ ಗೌರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಸುಮಾರು 15 ಎಕರೆ ಗೋಮಾಳದಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಬಾಲರಾಜ್ ಮಾತನಾಡಿ ಋಷಿಪುರ ಗ್ರಾಮದ ನಕಾಶೆ ಕಂಡ ಕಾಲುದಾರಿಯನ್ನು ಒತ್ತುವರಿ ಮಾಡಿದ್ದು ಕೂಡಲೆ ತೆರವುಗೊಳಿಸಿ ಸಾರ್ವಜನಿಕರು ಓಡಾಡಲು ಅವಕಾಶ ಮಾಡಿಕೊಡಬೇಕೆಂದು ಮತ್ತು ಹಾದಿಕೆರೆ ಗ್ರಾಮದಲ್ಲಿ ಹಲವು ವರ್ಷ ಗಳ ಹಿಂದೆ ನಿವೇಶನ ನೀಡಲು ದಾನ ಮಾಡಿರುತ್ತಾರೆ, ಗ್ರಾಮ ಪಂಚಾಯಿತಿ ಇದುವರೆಗೂ ಗ್ರಾಮಠಾಣ ವ್ಯಾಪ್ತಿಗೆ ಸೇರಿಸಿಕೊಳ್ಳದಿರುವುದರಿಂದ ನಿವಾಸಿಗಳು ಮನೆಯ ಇ-ಸ್ವತ್ತು ಇತರ ದಾಖಲೆ ಪಡೆದುಕೊಳ್ಳಲು ತೊಂದರೆ ಪಡುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು. ಹಾದಿಕೆರೆ ಗ್ರಾಮದಲ್ಲಿ ದಲಿತರ ಸ್ಮಶಾನ ಮುಳ್ಳಿನ ಗಿಡ ಗೆಂಟೆಗಳು ಬೆಳೆದಿದ್ದು ಅವುಗಳನ್ನು ತೆರವು ಗೊಳಿಸಿ ಶವಸಂಸ್ಕಾರಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಹೊಸಳ್ಳಿ ಸ.ನ.34ರಲ್ಲಿ ಹತ್ತು ಎಕರೆ ಜಾಗ ಮಂಜೂರು ಮಾಡಿಕೊಡ ಬೇಕೆಂದು ಒತ್ತಾಯಿಸಿದರು. ಬಗರ್ ಹುಕುಂ ಸಾಗುವಳಿ ಮಾಡಿದ ಹೊಸಳ್ಳಿ ಸ.ನಂ.27ರಲ್ಲಿ ದಲಿತರು ಸಾಗುವಳಿ ಮಾಡಿರುವ ಬಗರ್ ಹುಕುಂ ಜಮೀನನ್ನು ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಮುಖಂಡ ಜಿ.ಟಿ.ರಮೇಶ್ ಮಾತನಾಡಿ ತಾಲೂಕಿನಲ್ಲಿ ಬಹುತೇಕ ಸ್ಮಶಾನ ಒತ್ತುವರಿಯಾಗಿದ್ದು, ಸಂಬಂಧಿಸಿದ ಅಧಿಕಾರಿ ಗಳು ಸ್ಮಶಾನ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಎಸ್.ಎನ್.ಸಿದ್ರಾಮಪ್ಪ, ಎನ್.ಆರ್.ಪುರ ರಾಮು, ನಾಗರಾಜ್ ಗುಳ್ಳದ ಮನೆ, ಬಂಕನಕಟ್ಟೆ ಬಸವರಾಜ್, ವಿವಿಧ ಸಂಘಟನೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

11ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಉಪವಿಭಾಗೀಯ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತಿ ಉಸ್ತುವಾರಿ ಸಮಿತಿ ಸಭೆ ಏರ್ಪಡಿಸಲಾಗಿತ್ತು.