ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಇಲ್ಲಿಯ ನಗರಸಭೆ ಬಸ್ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ನ್ಯಾಯಾಧೀಶರು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಕಂಡು ೨ನೇ ಅಪರ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ. ಕಳವಳ ವ್ಯಕ್ತಪಡಿಸಿ, ಇದೇನು ಬಸ್ ನಿಲ್ದಾಣವೋ ಅಥವಾ ಮದ್ಯ ಮಾರಾಟ ಕೇಂದ್ರವೋ, ಒಂದು ಬಸ್ ನಿಲ್ದಾಣದಲ್ಲಿ ೪ ಬಾರ್‌ಗಳು, ಅಬಕಾರಿ ಇಲಾಖೆ ಯಾವ ಕಾನೂನಿನಡಿ ಪರವಾನಗಿ ನೀಡಿದೆ ಎಂದು ಅಬಕಾರಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಬಾರ್ ಸ್ಥಳಾಂತರಕ್ಕೆ ಸೂಚನೆ
ಬಸ್ ನಿಲ್ದಾಣದಲ್ಲಿ ಈ ರೀತಿ ಬಾರ್‌ಗಳಿದ್ದರೆ ಶಾಲಾ ಕಾಲೇಜು ಮಕ್ಕಳು, ಮಹಿಳೆಯರು, ನಾಗರಿಕರು ಬಸ್ ನಿಲ್ದಾಣಕ್ಕೆ ಬರುವುದಾರೂ ಹೇಗೆ ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ಮದ್ಯ ಮಾರಟ ಅಂಗಡಿಗೆ ತೆರಳಿದ ನ್ಯಾಯಾಧೀಶರು, ಬಸ್ ನಿಲ್ದಾಣದಲ್ಲಿ ಮದ್ಯ ಮಾರಾಟ ಮಾಡಲು ಯಾರಿಗೂ ಕಾನೂನುನಲ್ಲಿ ಅವಕಾಶವಿಲ್ಲ. ಕೂಡಲೇ ಮದ್ಯ ಮಾರಾಟ ಮಳಿಗೆ ಬೇರೆಡೆಗೆ ಸ್ಥಳಾಂತರಿಸಿ ಎಂದು ಸೂಚಿಸಿದರು.ಬಸ್ ನಿಲ್ದಾಣಕ್ಕೆ ಶಾಲಾ ಮಕ್ಕಳು ಮಹಿಳೆಯರು ಹಾಗೂ ಹಿರಿಯ ನಾಗರೀಕರು ಬರುವ ಜಾಗದಲ್ಲಿ ಮದ್ಯವನ್ನು ಸೇವನೆ ಮಾಡಿ ಮಹಿಳೆಯರ ಮೇಲೆ ಹಲ್ಲೇ ಮಾಡುವಂತಹ ಸಂದರ್ಭಗಳು ಬರಬಹುದು, ಇನ್ನೂ ಶಾಲಾ ಮಕ್ಕಳು ಮದ್ಯ ಸೇವನೆಗೆ ಆಕರ್ಷಿತರಾಗುವ ಅವಕಾಶಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ ಮದ್ಯ ಮಾರಾಟ ಮಳಿಗೆ ಮಾಲೀಕರಿಗೆ ಅರಿವು ಮೂಡಿಸಿದರು.
ಮದ್ಯದಂಗಡಿ ತೆರವಿಗೆ ಸೂಚನೆಸ್ಥಳದಲ್ಲೇ ಇದ್ದ ಪೌರಾಯುಕ್ತರಿಗೆ ನ್ಯಾಯಾಧೀಶರು ಸೂಚನೆ ನೀಡಿ, ನಗರಸಭೆಯ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ, ಕೂಡಲೇ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.ಸಾರಿಗೆ ಬಸ್‌ಗಳು ಮಹಿಳೆಯರು ಇದ್ದ ಕಡೆ ಬಸ್ ನಿಲ್ಲಿಸದೆ ಹೋಗುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ, ಬಸ್ ಚಾಲಕ ಬಸ್ ನಿಲ್ಲಿಸದೆ ತೆರಳಿದರೆ ಬಸ್ಸಿನ ಸಂಖ್ಯೆ ಅಥವಾ ಬಸ್‌ನ ಭಾವಚಿತ್ರ ಸಮೇತ ದೂರು ನೀಡಿದರೆ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ನಗರಸಭೆ ಬಸ್ ನಿಲ್ದಾಣದ ಶೌಚಾಲಯ, ನಗರಸಭೆ ಬಸ್ ನಿಲ್ದಾಣದ ಸ್ವಚ್ಛತೆ ಕುರಿತು ಪರಿಶೀಲಿಸಿದರು, ಸಾರ್ವಜನಿಕರು ಕಸವನ್ನು ಎಲ್ಲಿಂದರಲ್ಲಿ ಸುರಿಯಂದತೆ ನಗರಸಭೆ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕೆಂದು ಪೌರಯುಕ್ತರಿಗೆ ಸೂಚನೆ ನೀಡಿದರು.ಮದ್ಯ ಮಾರಾಟಕ್ಕೆ ಕಡಿವಾಣ
ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ದೇಶದಲ್ಲಿ ಎಲ್ಲಿಯೂ ಬಸ್ ನಿಲ್ದಾಣಗಳಲ್ಲಿ ಮದ್ಯ ಮಾರಟ ಅಂಗಡಿಗಳು ಇರುವುದಿಲ್ಲ, ಕೆಜಿಎಫ್ ಬಸ್ ನಿಲ್ದಾಣದಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ, ಕೂಡಲೇ ಬಸ್ ನಿಲ್ದಾಣದಲ್ಲಿ ಮದ್ಯ ಮಾರಟಕ್ಕೆ ನಗರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕು, ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿ ಪತ್ರವನ್ನು ವಾಪಸ್ ಪಡೆದುಕೊಳ್ಳಬೇಕೆಂದು ನಗರಸಭೆ ಪೌರಾಯುಕ್ತರನ್ನು ಒತ್ತಾಯಿಸಿದರು.ಅಬಕಾರಿ ಇಲಾಖೆಗೆ ಪತ್ರಈ ಸಂದರ್ಭದಲ್ಲಿ ಪೌರಾಯುಕ್ತ ಅಂಜಿನೇಯಲು ಮಾತನಾಡಿ, ಬಸ್ ನಿಲ್ದಾಣದಲ್ಲಿರುವ ಬಾರ್‌ಗಳನ್ನು ಸ್ಥಳಾಂತರಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆಯಲಾಗುವುದು. ಬಸ್ ನಿಲ್ದಾಣದ ಸ್ವಚ್ಛತೆಗೆ ೪ ಪೌರಕಾರ್ಮಿರನ್ನು ನೇಮಕ ಮಾಡಲಾಗುವುದು. ನಗರಸಭೆ ವಾಹನ ನಿಲುಗಡೆಗೆ ಸ್ಥಳವನ್ನು ನಿಗದಿಪಡಿಸಿದ್ದು, ಸಾರ್ವಜನಿಕರು ನಗರಸಭೆ ನಿಗದಿ ಮಾಡಿರುವ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕೆಂದು ಹೇಳಿದರು.