ಸಾರಾಂಶ
ಜ.25ರಂದು ಮುಖ್ಯಮಂತ್ರಿ ವಿರಾಜಪೇಟೆಗೆ ಆಗಮಿಸುವ ಹಿನ್ನೆಲೆಯಲ್ಲಿ ಈಗಾಗಲೇ ನಗರದಾದ್ಯಂತ ಹಾಕಲಾಗಿದ್ದ ಬಂಟಿಂಗ್ಸ್ ಧ್ವಜ ಫ್ಲೆಕ್ಸ್‌ಗಳನ್ನು ಜ.23ರಂದು ಸಂಜೆ 5 ಗಂಟೆಯೊಳಗೆ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಪುರಸಭೆಯ ವತಿಯಿಂದ ತೆರವುಗೊಳಿಸುವುದಾಗಿ ನೋಟಿಸ್ ಜಾರಿಗೊಳಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ಪ್ರಯುಕ್ತ ವಿರಾಜಪೇಟೆಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಜ.30ರ ವರೆಗೆ ವಿರಾಜಪೇಟೆ ನಗರದಾದ್ಯಂತ ಬಂಟಿಂಗ್ಸ್ ಧ್ವಜ ಫ್ಲೆಕ್ಸ್‌ಗಳನ್ನು ಪುರಸಭೆಯ ಅನುಮತಿ ಮೇರೆಗೆ ನಗರವನ್ನು ಅಲಂಕಾರಗೊಳಿಸಲಾಗಿತ್ತು. ಜ.25ರಂದು ಮುಖ್ಯಮಂತ್ರಿ ವಿರಾಜಪೇಟೆಗೆ ಆಗಮಿಸುವ ಹಿನ್ನೆಲೆಯಲ್ಲಿ ಈಗಾಗಲೇ ನಗರದಾದ್ಯಂತ ಹಾಕಲಾಗಿದ್ದ ಬಂಟಿಂಗ್ಸ್ ಧ್ವಜ ಫ್ಲೆಕ್ಸ್‌ಗಳನ್ನು ಜ.23ರಂದು ಸಂಜೆ 5 ಗಂಟೆಯೊಳಗೆ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಪುರಸಭೆಯ ವತಿಯಿಂದ ತೆರವುಗೊಳಿಸುವುದಾಗಿ ನೋಟಿಸ್ ಜಾರಿಗೊಳಿಸಲಾಗಿತ್ತು. ಇದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಪುರಸಭೆ ಮುಖ್ಯಾಧಿಕಾರಿಗಳನ್ನು ತೀವ್ರವಾಗಿ ತರಟೆಗೆ ತೆಗೆದುಕೊಂಡರು. ಹಿಂದೂ ಸಂಘಟನೆಗಳ ಆಕ್ರೋಶದ ಪರಿಣಾಮವಾಗಿ ಅನುಮತಿ ಪಡೆದ ದಿನಾಂಕ 30.01.2024ರ ವರೆಗೂ ನಗರದಲ್ಲಿ ಅಲಂಕರಿಸಿದ ಯಾವುದೇ ಫ್ಲೆಕ್ಸ್, ಧ್ವಜ, ಬಂಟಿಂಗ್‌ಗಳನ್ನು ತೆರವುಗೊಳಿಸುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗಳು ನೋಟಿಸ್ ವಾಪಸ್ ಪಡೆದಿದ್ದಾರೆ. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ದೇಶದ ಎಲ್ಲೆಡೆ ಪ್ರಭು ಶ್ರೀರಾಮರ ಮಂದಿರ ಮತ್ತು ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ಮನೆಮಾಡಿದೆ. ಎಲ್ಲ ಮನೆ, ಮನೆಗಳು, ನಗರದ ಬೀದಿ, ದೇಗುಲಗಳಲ್ಲಿ ಮಂಗಳಕರ ವಾತಾವರಣ ನಿರ್ಮಾಣವಾಗಿದೆ. ನಗರವು ಕೇಸರಿ ತೋರಣಗಳು, ಪ್ರಭು ಶ್ರೀ ರಾಮರ ಭಾವಚಿತ್ರಗಳನ್ನು ಅಳವಡಿಸಿಕೊಂಡು ರಾರಾಜಿಸುತ್ತಿದೆ. ಆದರೆ ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ ತೋರಣಗಳ್ನು ತೆರವು ಮಾಡುವ ಆದೇಶ ಬಂದಿರುವುದು ಹಿಂದೂಗಳ ಭಾವನೆಗಳನ್ನು ಕೆರಳಿಸಿದೆ. ಕಾಂಗ್ರೆಸ್ ಪಕ್ಷದ ನಾಯಕರ ಬೃಹತ್ ಕಟ್ ಔಟ್ ಅಳವಡಿಸಿದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ರಾಮ ದೇವರ ಚಿತ್ರ ಮತ್ತು ಕೇಸರಿ ಕಂಡಲ್ಲಿ ತೆರವು ಮಾಡುವಂತೆ ಹೇಳುವುದು ರಾಜಕೀಯ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿ ಸುಬ್ರಮಣಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಬಿ.ಎಂ. ಕುಮಾರ್, ಬಜರಂಗ ದಳ ಜಿಲ್ಲಾ ಪ್ರಮುಖ್ ವಿವೇಕ್ ರೈ, ಬಿಜೆಪಿ ಪ್ರಮುಖರಾದ ವಾಟೇರಿರ ಬೋಪಣ್ಣ, ಟಿ.ಪಿ. ಕೃಷ್ಣ, ಹಿಂದೂ ಪರ ಸಂಘಟನೆಗಳ ಪ್ರಮುಖರು, ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.