ಹಳೆ ಬಸ್‌ ನಿಲ್ದಾಣದ ಅಂಗಡಿಗಳ ತೆರವಿಗೆ ಸೂಚನೆ

| Published : Sep 16 2025, 12:03 AM IST

ಸಾರಾಂಶ

ಹಳೆ ಬಸ್‌ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿರುವವರಿಗೆ ಅನ್ಯಾಯ ವಾಗಬಾರದೆಂಬ ಉದ್ದೇಶದಿಂದ ಹರಾಜಿನ ಮೊತ್ತಕ್ಕೆ ಹೆಚ್ಚುವರಿಯಾಗಿ ಶೇ.5 ರಷ್ಟು ಹಣ ಕಟ್ಟಿ ನೂತನ ಬಸ್‌ ನಿಲ್ದಾಣದಲ್ಲಿ ಮಳಿಗೆ ಪಡೆಯುವ ಅವಕಾಶ ನೀಡಲಾಗಿದೆ. ಆದರೆ ಇನ್ನೂ ಮಳಿಗೆ ಖಾಲಿ ಮಾಡದಿರುವುದು ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಇನ್ನು ಮೂರು ತಿಂಗಳೂಳಗೆ ವಾಣಿಜ್ಯ ಮಳಿಗೆ ನಿರ್ಮಿಸಿ ನೀಡುವ ಜವಾಬ್ದಾರಿ ತಮ್ಮದಾಗಿದ್ದು, ಇಂದೇ ನಿಮ್ಮ ಮಳಿಗೆಗಳನ್ನು ಖಾಲಿ ಮಾಡಿ ನೂತನ ಬಸ್‌ ನಿಲ್ದಾಣ ಕಾಮಗಾರಿಯ ಚಾಲನೆಗೆ ಸಹಕಾರ ನೀಡಿ ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.ಅವರು ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬಸ್‌ ನಿಲ್ದಾಣ ಸಂರ್ಕೀಣದ ಮಳಿಗೆದಾರರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಬೆಳೆಯುತ್ತಿರುವ ಮಾಲೂರು ಪಟ್ಟಣಕ್ಕೆ ಹಾಲಿ ಇರುವ ಬಸ್‌ ನಿಲ್ದಾಣ ಚಿಕ್ಕದಾಗಿದ್ದು, ಸೌಲಭ್ಯ ವಂಚಿತವಾಗಿದೆ. ಈ ನಿಟ್ಟಿನಲ್ಲಿ 21 ಕೋಟಿ ರು.ಗಳ ವೆಚ್ಚದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ ಸರ್ಕಾರ ಅನುಮತಿ ನೀಡಿದೆ ಎಂದರು.

ಅಂಗಡಿಗಳ ತೆರವಿಗೆ ಸೂಚನೆ

ಹಳೆ ಬಸ್‌ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿರುವವರಿಗೆ ಅನ್ಯಾಯ ವಾಗಬಾರದೆಂಬ ಉದ್ದೇಶದಿಂದ ಹರಾಜಿನ ಮೊತ್ತಕ್ಕೆ ಹೆಚ್ಚುವರಿಯಾಗಿ ಶೇ.5 ರಷ್ಟು ಹಣ ಕಟ್ಟಿ ನೂತನ ಬಸ್‌ ನಿಲ್ದಾಣದಲ್ಲಿ ಮಳಿಗೆ ಪಡೆಯುವ ಅವಕಾಶ ನೀಡಲಾಗಿದೆ. ಆದರೆ ಇನ್ನೂ ಮಳಿಗೆ ಖಾಲಿ ಮಾಡದಿರುವುದು ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗಿದೆ. ನಾವು ಕಟ್ಟಡವನ್ನು ಗುತ್ತಿಗೆದಾರನಿಗೆ ಹಸ್ತಾಂತರ ಮಾಡಿದ ಮೂರು ತಿಂಗಳೂಳಗೆ ಅಂಗಡಿ ಕಟ್ಟಿ ಕೊಡುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಇಂದೇ ಅಂಗಡಿಗಳನ್ನು ಖಾಲಿ ಮಾಡಿ ನಗರಸಭೆಗೆ ಹಸ್ತಾಂತರಿಸಬೇಕು ಎಂದರು.

ಅಕ್ಟೋಬರ್‌ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ 2500 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈಗಿನ ತಾತ್ಕಲಿಕ ಬಸ್‌ ನಿಲ್ದಾಣ ಬಗ್ಗೆ ಬಹಳಷ್ಟು ಜನರಿಂದ ಅಕ್ಷೇಪ ವ್ಯಕ್ತವಾಗಿದ್ದು, ಅದನ್ನು ಇನ್ನೆರಡು ದಿನದಲ್ಲಿ ರೈಲ್ವೇ ಸೇತುವೆ ಬಳಿಗೆ ಸ್ಥಳಾಂತರಿಸಲಾಗುವುದು ಎಂದರು.

ಮುಂಗಡ ಹಣ ಮುಟ್ಟುಗೋಲು

ಪೌರಯುಕ್ತ ಪ್ರದೀಪ್‌ ಮಾತನಾಡಿ, ಹರಾಜಿನಲ್ಲಿ ಮಳಿಗೆ ಪಡೆದವರಲ್ಲಿ 12 ಮಂದಿ ಭಾಗಶಃ ಹಣ ಕಟ್ಟಿದ್ದು, ಇನ್ನೂ 21 ಮಂದಿ ಹಣ ಪಾವತಿಸಿಲ್ಲ. ಅವರಿಗೆಲ್ಲ ಇಂದೇ ಕೊನೆ ದಿನವಾಗಿದ್ದು, ಹಣ ಕಟ್ಟದಿದ್ದರೆ ಅವರ ಮುಂಗಡ ಹಣ ಮುಟ್ಟುಗೋಲು ಹಾಕಿಕೊಂಡು ಮುಂಬರಲಿರುವ ದಿನದಲ್ಲಿ ಮತ್ತೇ ಹರಾಜು ಮಾಡಲಾಗುವುದು ಎಂದರು.