ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತುಂಗಾಭದ್ರಾ ಜಲಾಶಯದಲ್ಲಿ ಗೇಟ್ ದುರಸ್ಥಿಯಿಂದಾಗಿ ಲಕ್ಷಾಂತರ ಕ್ಯುಸೆಕ್ ನೀರು ಪೋಲಾದ ಬೆನ್ನಲ್ಲೆ ಜಲಾಶಯಗಳ ನಿರ್ವಹಣೆಯತ್ತ ಎಲ್ಲರ ಚಿತ್ತ ಹರಿದಿದೆ. ಜಲಾಶಯ ನಿರ್ವಹಣೆಯಲ್ಲಿ ಕೊಂಚ ಲೋಪವಾದರೂ ಅದರಿಂದಾಗುವ ಅನಾಹುತದ ಬಗ್ಗೆ ತುಂಗಾಭದ್ರ ಜಲಾಶಯ ಎಚ್ಚರಿಕೆ ಸಂದೇಶ ನೀಡಿದೆ.ಇಂತಹ ಸಂದರ್ಭದಲ್ಲಿ ತುಂಗಾ ಜಲಾಶಯದಲ್ಲಿ ಇಂತಹದ್ದೆ ಅನಾಹುತ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯ ಮುನ್ನೆಚ್ಚರಿಕೆಯಿಂದ ತಪ್ಪಿರುವುದು ಪ್ರಶಂಸೆಗೆ ಕಾರಣವಾಗಿದೆ.
ತುಂಗಾ ಜಲಾಶಯದಲ್ಲಿ ಒಟ್ಟು 22 ರೇಡಿಯಲ್ ಗೇಟ್‌ಗಳ ಪೈಕಿ ಒಂದು ಕ್ರಸ್ಟ್ ಗೇಟ್ ಕೆಲಸ ಮಾಡುತ್ತಿರಲಿಲ್ಲ. ಮಳೆಗಾಲದ ಆರಂಭದಲ್ಲಿ ಜಲಾಶಯದ 8ನೇ ಗೇಟ್‌ನ ವೈಯರ್‌ರೋಪ್ ಹಾಳಾಗಿರುವುದನ್ನು ಗಮನಿಸಿದ ಎಂಜಿನಿಯರ್‌ಗಳು ಇದನ್ನು ಓಪನ್ ಮಾಡದೆ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದಾರೆಆಗೊಂದು ವೇಳೆ ಒತ್ತಡ ಹಾಕಿ ಗೇಟ್ ಎತ್ತಲು ಹೋಗಿ ಹಾಳಾದರೆ ಮಳೆಗಾಲ ಮುಗಿಯುವವರೆಗೂ ದುರಸ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಳೆಗಾಲ ಮುಗಿಯುವರೆಗೂ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಸುಮ್ಮನಾದರು. ಜುಲೈನಲ್ಲಿ 85 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಇದ್ದಾಗ ಜಲಾಶಯದ ಎಲ್ಲ 22 ಗೇಟ್‌ಗಳನ್ನು ಓಪನ್ ಮಾಡಲೇಬೇಕಾಗುತ್ತದೆ. ಆದರೆ, ಈ ಬಾರಿ 8ನೇ ಗೇಟ್ ಅನ್ನು ಓಪನ್ ಮಾಡದೆ 21 ಗೇಟ್ ಮೂಲಕವೇ ಎಲ್ಲ ನೀರನ್ನು ಹೊರಬಿಟ್ಟಿದ್ದಾರೆ.
2019, 20ರಲ್ಲಿ ಲಕ್ಷ ಕ್ಯೂಸೆಕ್ಸ್ ಅಧಿಕ ನೀರು ಬಂದಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಗೇಟ್ ಓಪನ್ ಮಾಡುವುದು ಅನಿವಾರ್ಯ. ಜುಲೈ ತಿಂಗಳಲ್ಲಿ 85 ಸಾವಿರ ಕ್ಯೂಸೆಕ್ಸ್ ವರೆಗೂ ಒಳಹರಿವು ಬಂದಿತ್ತು. ಸತತ 20 ದಿನಗಳ ಮಳೆಯಿಂದ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಿದ್ದರು.ಒಳಹರಿವು ಏರಿದಂತೆ, ಇಳಿದಂತೆ ಗೇಟ್ ಎತ್ತರ ಇಳಿಸಿಬೇಕಾದ, ಏರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಕಷ್ಟಕರ ಸಂದರ್ಭದಲ್ಲೂ ಒಂದು ಗೇಟ್ ಅನ್ನು ಓಪನ್ ಮಾಡದೆ ಪರಿಸ್ಥಿತಿ ನಿಭಾಯಿಸಿದ್ದಾರೆ. ತುಂಗಾ ಜಲಾಶಯದ ಎಂಜಿನಿಯರ್, ಅಧಿಕಾರಿ, ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ದೊಡ್ಡ ಪ್ರಮಾಣದ ಸಂಭಾವ್ಯ ದುರಂತ, ನಷ್ಟವೊಂದು ತಪ್ಪಿದೆ.
ನದಿಗೆ ನೀರು ಹರಿಸಿದ್ದಲ್ಲದೇ ಅಚ್ಚುಕಟ್ಟು ಪ್ರದೇಶಕ್ಕೆ, ಕೆರೆ ತುಂಬಿಸುವ ಯೋಜನೆಗಳಿಗೂ ನೀರು ಹರಿಯುತ್ತಿದೆ. ತುಂಗಭದ್ರಾ ಜಲಾಶಯ ತುಂಬಲು ಪ್ರಮುಖ ಆಸರೆಯೇ ತುಂಗಾ ಜಲಾಶಯವಾಗಿದ್ದು, ಮೂರುವರೆ ಟಿಎಂಸಿ ಸಾಮರ್ಥ್ಯದ ಜಲಾಶಯ ಒಂದು ದೊಡ್ಡ ಮಳೆಗೆ ಭರ್ತಿಯಾಗುತ್ತದೆ. ನಂತರ ಶಿವಮೊಗ್ಗ ನಗರಕ್ಕೆ ಕುಡಿವ ನೀರಿಗೆ, ತುಂಗಭದ್ರಾ ಜಲಾಶಯಕ್ಕೆ, ಶಿವಮೊಗ್ಗ, ನ್ಯಾಮತಿ, ಹೊನ್ನಾಳಿವರೆಗಿನ ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ, ತುಂಗಾ ಏತ ನೀರಾವರಿ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಜತೆಗೆ ಅದೇ ಸಮಯದಲ್ಲಿ ಉಳಿದ ಕಡೆಯೂ ನೀರು ಹರಿಸ ಬೇಕಾದ ಅನಿವಾರ್ಯತೆ ಇರುತ್ತದೆ. ನದಿಗೆ ಒಳಹರಿವು ಇಳಿಮುಖವಾದಾಗ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ. ನೀರನ್ನು ಉಳಿಸಿಕೊಳ್ಳುವುದು ಅಷ್ಟೇ ಅನಿವಾರ್ಯವಾಗಿರುತ್ತದೆ.ಇನ್ನು, ಜಲಾಶಯದಿಂದ ನೀರು ನದಿಗೆ ಬಿಡುವ ವೇಳೆ 8ನೇ ಗೇಟ್‌ದಾರದ ಎಳೆಯಂತಿರುವ ವೈಯರ್ ರೋಪ್ ಸ್ವಲ್ಪ ಭಾಗ ತುಂಡಾಗಿದ್ದನ್ನು ಗಮನಿಸಲಾಗಿತ್ತು. ಒಂದು ವೇಳೆ ಗೇಟ್ ತೆಗೆದಿದ್ದರೂ ಅಂತಹ ಗಂಭೀರ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಯಾವುದಕ್ಕೂ ಸುರಕ್ಷಿತ ಕ್ರಮವಾಗಿ ಮುನ್ನೆಚ್ಚರಿಕೆ ವಹಿಸಿ ಗೇಟ್ ತೆರೆಯಲಿಲ್ಲ. ವೈಯರ್ ರೋಪ್ ಸಮಸ್ಯೆ ಕಂಡು ಬಂದ ನಂತರ ಮೇಲಾಧಿಕಾರಿಗಳಿಗೆ ಪತ್ರ ಬರೆದು ವೈಯರ್ ರೋಪ್ ದುರಸ್ತಿಗೆ ಬೇಕಾದ ಸಾಮಗ್ರಿಗಳನ್ನು ಬೆಂಗಳೂರಿನಿಂದ ತರಿಸುವ ವ್ಯವಸ್ಥೆಯಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ವೈಯರ್ ರೋಪ್ ಸಮಸ್ಯೆ ಸರಿಪಡಿಸಲಾಗುವುದು ಎಂದು ತುಂಗಾ ಜಲಾಶಯದ ಎಂಜಿನಿಯರ್ ತಿಪ್ಪಾನಾಯ್ಕ್ ಹೇಳಿದರು.