ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ 15 ಕ್ಯಾಂಪ್‌ಗಳಿಗೆ ಶೀಘ್ರದಲ್ಲಿಯೇ ಕಂದಾಯ ಇಲಾಖೆಯಿಂದ ಮಾನ್ಯತೆ ದೊರೆತು ಅಧಿಸೂಚನೆ ಹೊರಬೀಳಲಿದೆ. ನಂತರ ಆ ಗ್ರಾಮಗಳು ಕಂದಾಯ ಗ್ರಾಮಗಳಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆಯಾಗುತ್ತವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ಅವರು ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ತಾಲ್ಲೂಕಿನ ರೈತ ನಗರ ಕ್ಯಾಂಪ್, ರಾಮ ಕ್ಯಾಂಪ್, ಚನ್ನಳ್ಳಿ ಬಳಿ ಇರುವ ದೇವಿ ಕ್ಯಾಂಪ್, ರಾಮರೆಡ್ಡಿ ಕ್ಯಾಂಪ್, ಕುನ್ನಟಗಿ ಕ್ಯಾಂಪ್, ತಾಯಮ್ಮ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್, ಗೊರೆಬಾಳ ಕ್ಯಾಂಪ್, ಮೂಡಲಗಿರಿ ಕ್ಯಾಂಪ್, ಗಣೇಶ ಕ್ಯಾಂಪ್, ದೇವಿ ಕ್ಯಾಂಪ್, ಗೀತಾ ಕ್ಯಾಂಪ್, ಕೊಪ್ಪಳ ಕ್ಯಾಂಪ್, ದುರ್ಗಾ ಕ್ಯಾಂಪ್, ಬಸವರಾಜೇಶ್ವರಿ ಕ್ಯಾಂಪ್‌ಗಳು ಕಂದಾಯ ಗ್ರಾಮಗಳಾಗಿ ಘೋಷಣೆಯಾಗಲಿವೆ ಎಂದು ಹೇಳಿದರು.ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ನಡೆಯು ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತು ಪೀಠೋಪಕರಣಗಳ ಖರೀದಿಗೆ ಬಿಡುಗಡೆ ಮಾಡಲಾಗುವುದು. ರಾಯಚೂರು ಜಿಲ್ಲೆಗೆ 16 ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿದ್ದು, ಅದರಲ್ಲಿ ಸಿಂಧನೂರು ತಾಲ್ಲೂಕಿನ ಸಾಲಗುಂದಾ, ಮುಕ್ಕುಂದಾ, ಆಯನೂರು ಗ್ರಾಮದಲ್ಲಿ ಪಬ್ಲಿಕ್ ಶಾಲೆ ತೆರೆಯಲಾಗುವುದು. ಪಗಡದಿನ್ನಿ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು.
ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿ ನಿಲಯಗಳಿಗೆ ಕಂಪ್ಯೂಟರ್, ಪೀಠೋಪಕರಣ ಸೇರಿದಂತೆ ಮೂಲ ಸೌಕರ್ಯ ಒದಗಿಸಲು 10 ಕೋಟಿ ಖರ್ಚು ಮಾಡಲಾಗುವುದು. ಒಳಬಳ್ಳಾರಿ ಏತನೀರಾವರಿ ಯೋಜನೆಯಲ್ಲಿ 6.5 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದ್ದು, ಅದರಲ್ಲಿ 2.5 ಸಾವಿರ ಎಕರೆ ಜಮೀನಿಗೆ ತುಂತುರು ಹನಿ ನೀರಾವರಿ ಸೌಕರ್ಯ ಒದಗಿಸಲು 73 ಕೋಟಿ ಮಂಜೂರಾಗಿದೆ. ಅಲ್ಲಿಯ ರೈತರು ಒಪ್ಪದಿದ್ದರೆ ಅಲಬನೂರಿನ 4 ಸಾವಿರ ಎಕರೆ ಜಮೀನಿಗೆ ತುಂತುರು ಹನಿ ನೀರಾವರಿ ಸೌಕರ್ಯ ಕಲ್ಪಿಸುವುದಾಗಿ ವಿವರಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ನೀಡಿದ ₹50 ಕೋಟಿ ಅನುದಾನದಲ್ಲಿ ಸಿಂಧನೂರು-ಹೆಡಗಿನಾಳ ರಸ್ತೆ, ದಢೆಸುಗೂರು ಕ್ಯಾಸ್ನಿಂದ ಅಲಬನೂರು ಕ್ರಾಸ್ ವರೆಗೆ, ಸೋಮಲಾಪುರದಿಂದ ಅಂಬಾಮಠ, ಪುನರ್ವಸತಿ ಕ್ಯಾಂಪ್-1 ರಿಂದ 5ರ ವರೆಗೆ ಮತ್ತು ಈರಣ್ಣ ಕ್ಯಾಂಪ್ ವರೆಗೆ ರಸ್ತೆ ನಿರ್ಮಾಣಕ್ಕೆ ಒಟ್ಟು 24 ಕೋಟಿ ಖರ್ಚು ಮಾಡಲಾಗುವುದು. ₹14 ಕೋಟಿ ವೆಚ್ಚದಲ್ಲಿ ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.
ಅಕ್ಷರ ಆವಿಸ್ಕಾರ ಯೋಜನೆಯಲ್ಲಿ 81 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ದುರಸ್ತಿ, ಪ್ರಗತಿಪಥ ಯೋಜನೆಯಲ್ಲಿ ತಾಲ್ಲೂಕಿನ 100 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು. ಅಂಬಾಮಠಕ್ಕೆ ಪ್ರವಾಸೋದ್ಯಮಿ ಇಲಾಖೆಯಿಂದ ₹175 ಕೋಟಿ ಅಂದಾಜು ಪತ್ರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆ ಹಣದಲ್ಲಿ ಆಸ್ಪತ್ರೆ, ರಂಗಮಂದಿರ, 5 ಸಾವಿರ ಜನರು ಏಕಕಾಲಕ್ಕೆ ಊಟ ಮಾಡುವ ಊಟದ ಹಾಲ್, 1 ಸಾವಿರ ಜನರಿಗೆ ವಸತಿಗೆ ಛತ್ರ, ರಥಬೀದಿ, ಆಸ್ಪತ್ರೆ ವ್ಯವಸ್ಥೆ ಒಳಗೊಂಡಿದ್ದು, ರಾಯಚೂರು ಮತ್ತು ಕೊಪ್ಪಳ ಸಂಸದರ ಸಹಕಾರ ಪಡೆದು ಸರ್ಕಾರದಿಂದ ಮಂಜೂರು ಪಡೆಯಲು ಪ್ರಯತ್ನಿಸುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.ದೀಪಾವಳಿಯ ಕೊಡುಗೆ..
ತಾಲ್ಲೂಕಿನಲ್ಲಿ ಒಟ್ಟು 25 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ದಶಕ ಗಳಿಂದ ಕಂದಾಯ ಗ್ರಾಮಗಳನ್ನು ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿತ್ತು. ಈಗ ಅದು ದೀಪಾವಳಿಯ ಕೊಡುಗೆಯಾಗಿ ಸರ್ಕಾರ ಅನುಮತಿ ನೀಡಿದೆ.- ಹಂಪನಗೌಡ ಬಾದರ್ಲಿ, ಶಾಸಕ