24 ಗಂಟೆಯಲ್ಲಿಯೇ ಖತರ್ನಾಕ್ ಕಳ್ಳರ ಬಂಧನ

| Published : Feb 28 2024, 02:32 AM IST

ಸಾರಾಂಶ

ಕೊಪ್ಪಳ ತಾಲೂಕಿನ ಅಮರಾಪುರ ಗ್ರಾಮದ ಸುರೇಶರಡ್ಡಿ ವೆಂಕೋಬಾ ಅವರನ್ನು ಹೆದ್ದಾರಿಯಲ್ಲಿ ಅಡ್ಡಗಟ್ಟಿ ₹20 ಲಕ್ಷ ದೋಚಿದ್ದ ಪ್ರಕರಣವನ್ನು ಪೊಲೀಸರು 24 ತಾಸಿನಲ್ಲೇ ಭೇದಿಸಿದ್ದಾರೆ.

ಕೊಪ್ಪಳ: ಬೈಕ್‌ನಲ್ಲಿ ₹20 ಲಕ್ಷ ಸಾಗಿಸುವ ಮಾಹಿತಿ ಪಡೆದು ಹೆದ್ದಾರಿಯಲ್ಲಿ ಅಡ್ಡಗಟ್ಟಿ ದೋಚಿದ ದರೋಡೆ ಪ್ರಕರಣವನ್ನು 24 ತಾಸಿನಲ್ಲೇ ಕೊಪ್ಪಳ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ, ₹17.32 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಬಳಸಿದ ಕಾರು ಮತ್ತು ಬೈಕ್ ಸಹ ಆರೋಪಿಗಳಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಮರಾಪುರ ಗ್ರಾಮದ ಸುರೇಶರಡ್ಡಿ ವೆಂಕೋಬಾ ಅವರು ಸೈಟ್ ಖರೀದಿಸುವ ಸಲುವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ₹20 ಲಕ್ಷವನ್ನು ತನ್ನ ಸ್ನೇಹಿತನ ಮನೆಯಿಂದ ತೆಗೆದುಕೊಂಡು ಮಧ್ಯಾಹ್ನ ತೆರಳುತ್ತಿರುವಾಗ ಸಿದ್ದಾಪುರ ಗ್ರಾಮ ದಾಟಿದ ಆನಂತರ ಅಡ್ಡಗಟ್ಟಿದ ದರೋಡೆಕೋರರು ಚಾಕು ತೋರಿಸಿ, ದೋಚಿ, ಕಾರಿನಲ್ಲಿ ಪರಾರಿಯಾಗಿದ್ದರು.

ಘಟನೆಯ ಕುರಿತು ತಕ್ಷಣ ಸುರೇಶರಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಮತ್ತು ದರೋಡೆಕೋರರ ಚಹರೆ ವಿವರಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಇಡೀ ಜಿಲ್ಲಾದ್ಯಂತ ಹದ್ದಿನ ಕಣ್ಣಿರಿಸಲು ಸೂಚಿಸಿದರು. ನಂಬರ್ ಪ್ಲೇಟ್ ಇಲ್ಲದ ಕಾರು ಎಂದು ಮಾಹಿತಿ ಪಡೆದಿದ್ದರಿಂದ ಅದನ್ನು ಬೆನ್ನ ಹತ್ತಿದರು.

ಆರೋಪಿಗಳ ಸುಳಿವು ಸಿಕ್ಕಿತು. ಈ ಹಿಂದೆಯೂ ಹಲವು ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡಿದ್ದರಿಂದಲೇ ಈ ಕೃತ್ಯ ಸಹ ನಡೆದಿದೆ ಎಂಬ ಮಾಹಿತಿ ಲಭಿಸಿದ್ದು ಬಂಧನಕ್ಕೆ ಸುಲಭವಾಯಿತು. ದರೋಡೆ ಮಾಡಿದ ಹಣವನ್ನು ಬೇರೆ ಬೇರೆಯವರು ಹಂಚಿಕೆ ಮಾಡಿದ್ದರಿಂದ ಅವರಿಂದ ₹17.32 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ವಶಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ಆರೋಪಿಗಳಾದ ಹಿರೇಜಂತಗಲ್ ಹುಸೇನ ಬಾಷಾ, ಗಂಗಾವತಿಯ ಶಿವಮೂರ್ತಿ, ಕಟರಾಂಪುರದ ಉದಯಸಿಂಗ್, ಡಾಣಾಪುರದ ಹುನುಮೇಶ, ವಿರೂಪಾಪುರದ ಪೃಥ್ವಿರಾಜ ಎಂಬವರನ್ನು ಬಂಧಿಸಲಾಗಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಮಾಹಿತಿ ಕೊಟ್ಟಿದ್ದೇ ಸ್ನೇಹಿತ: ಸುರೇಶ ರಡ್ಡಿಯೊಂದಿಗೆ ವ್ಯವಹಾರದಲ್ಲಿ ಭಾಗಿಯಾಗಿದ್ದ ಹನುಮೇಶ ಎನ್ನುವಾತನೇ ಸುರೇಶರಡ್ಡಿ ಬೈಕ್‌ನಲ್ಲಿ ₹20 ಲಕ್ಷ ಒಯ್ಯುತ್ತಿರುವ ಮಾಹಿತಿಯನ್ನು ಹುಸೇನ ಬಾಷಾ ಎಂಬವನಿಗೆ ನೀಡಿದ್ದ. ಈಗ ಹನುಮೇಶ ಕೂಡ ಆರೋಪಿಯಾಗಿದ್ದಾನೆ.

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಪ್ರಕರಣದ ಮಾಹಿತಿ ನೀಡಿದ್ದಾರೆ. ಕಾರ್ಯಚರಣೆ ನಡೆಸಿದ ತಂಡದಲ್ಲಿದ್ದವರಿಗೆ ಸೂಕ್ತ ಬಹುಮಾನ ನೀಡಲಾಗುವುದು. ನನ್ನ ನಿರೀಕ್ಷೆ ಮೀರಿ ತಂಡ ಕಾರ್ಯ ನಿರ್ವಹಿಸಿದೆ ಎಂದು ಬಣ್ಣಿಸಿದರು.

ಗಂಗಾವತಿ ಡಿವೈಎಸ್ಪಿ ಸಿದ್ಲಿಂಗಪ್ಪಗೌಡ ಪಾಟೀಲ್ ಹಾಗೂ ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಇದ್ದರು.