ಸಾರಾಂಶ
ಮೈಸೂರು : ಬೆಂಗಳೂರಿನಲ್ಲಿ ಬುಧವಾರ ನಿಧನರಾದ ಖ್ಯಾತ ಕಾದಂಬರಿಕಾರ ಡಾ। ಎಸ್.ಎಲ್. ಭೈರಪ್ಪ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಗರದ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು. ಹೊಯ್ಸಳ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಚ್.ಸಿ.ಮಹದೇವಪ್ಪ, ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸೇರಿ ಹಲವು ಗಣ್ಯರು ಈ ವೇಳೆ ಹಾಜರಿದ್ದು, ಅಗಲಿದ ಮುತ್ಸದ್ಧಿಗೆ ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮೊದಲು, ಭೈರಪ್ಪ ಅವರ ಪಾರ್ಥೀವ ಶರೀರವನ್ನು ಜೆಎಸ್‌ಎಸ್ ಆಸ್ಪತ್ರೆಯ ಶೈತ್ಯಾಗಾರದಿಂದ ಬೆಳಗ್ಗೆ 9.10ಕ್ಕೆ ಕುವೆಂಪುನಗರದ ಉದಯರವಿ ರಸ್ತೆಯ ಅವರ ನಿವಾಸಕ್ಕೆ ತರಲಾಯಿತು.
ಈ ವೇಳೆ, ಪುರೋಹಿತರಾದ ಚಂದ್ರಶೇಖರ ಶಾಸ್ತ್ರಿ ಅವರ ನೇತೃತ್ವದ ಏಳು ಜನ ಪುರೋಹಿತರ ತಂಡ, ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು. ಹೊಯ್ಸಳ ಬ್ರಾಹ್ಮಣ ಸಂಪ್ರದಾಯದಂತೆ ಅವರ ಮಕ್ಕಳಾದ ರವಿಶಂಕರ್, ಉದಯ ಶಂಕರ್ ಅಂತಿಮ ವಿಧಿ ವಿಧಾನವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಬಳಿಕ, 10.30ರ ಸುಮಾರಿಗೆ ಚಾಮುಂಡಿಬೆಟ್ಟದ ತಪ್ಪಲಿನ ಹರಿಶ್ಚಂದ್ರಘಾಟ್‌ಗೆ ಮೃತದೇಹವನ್ನು ಕರೆತರಲಾಯಿತು. ಈ ವೇಳೆ, ಗಣ್ಯರು, ಸಾರ್ವಜನಿಕರು ಆಗಮಿಸಿ, ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಬಳಿಕ, ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಹತ್ತು ಮಂದಿ ಪೊಲೀಸರು ಮೂರು ಬಾರಿ, ಅಂದರೆ ಒಟ್ಟು 30 ಗುಂಡುಗಳನ್ನು ಹಾರಿಸಿ ಗೌರವ ಸಲ್ಲಿಸಿದರು. ನಂತರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಚ್.ಸಿ. ಮಹದೇವಪ್ಪ ಅವರು ಭೈರಪ್ಪ ಅವರ ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಪುತ್ರರಿಗೆ ಹಸ್ತಾಂತರಿಸಿದರು.
ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುವಾರ್, ತೇಜಸ್ವಿನಿ ಅನಂತಕುವಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಡಿಸಿಪಿ ಬಿಂದುಮಣಿ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಭೈರಪ್ಪ ಅವರ ಹುಟ್ಟೂರಾದ ಹಾಸನ ಜಿಲ್ಲೆಯ ಸಂತೇಶಿವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೂರು ಬಸ್‌ಗಳಲ್ಲಿ ಆಗಮಿಸಿ, ಅವರ ಅಂತಿಮ ದರ್ಶನ ಪಡೆದರು.
ಬಳಿಕ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಭೈರಪ್ಪ ಅವರ ಚಿತೆಗೆ ಪುತ್ರರಾದ ರವಿಶಂಕರ್, ಉದಯ ಶಂಕರ್, ಲೇಖಕಿ ಸಹನಾ ವಿಜಯ್ ಕುಮಾರ್ ಮತ್ತು ಮಾಜಿ ಸಂಸದ ಪ್ರತಾಪ ಸಿಂಹ ಅಗ್ನಿಸ್ಪರ್ಶ ಮಾಡಿದರು. ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಆಗುತ್ತಿದ್ದಂತೆ ಅಭಿಮಾನಿಗಳು ‘ಭೈರಪ್ಪ ಅಮರ್ ರಹೇ, ಅಮರ್ ರಹೇ ಭೈರಪ್ಪಾಜಿ, ಅಮರ್ ರಹೇ’ ಎಂಬ ಘೋಷಣೆ ಕೂಗಿದರು.

;Resize=(128,128))
;Resize=(128,128))