ಸಾರಾಂಶ
ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ ಅವರ ನಿವಾಸ. ಎದುರಿಗೆ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರ ಮನೆ. ಎಷ್ಟೋ ಮಂದಿ ಇದನ್ನು ಕೇಳಿದಾಗ, ಬಲ ಹಾಗೂ ಎಡಪಂಥೀಯರು ಎದುರು- ಬದುರು ಇದ್ದಾರೆ! ಎಂದೇ ತಮಾಷೆಯಾಗಿ ಮಾತನಾಡುತ್ತಿದ್ದರು.
ಅಂಶಿ ಪ್ರಸನ್ನಕುಮಾರ್
ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ ಅವರ ನಿವಾಸ. ಎದುರಿಗೆ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರ ಮನೆ. ಎಷ್ಟೋ ಮಂದಿ ಇದನ್ನು ಕೇಳಿದಾಗ, ಬಲ ಹಾಗೂ ಎಡಪಂಥೀಯರು ಎದುರು- ಬದುರು ಇದ್ದಾರೆ! ಎಂದೇ ತಮಾಷೆಯಾಗಿ ಮಾತನಾಡುತ್ತಿದ್ದರು. ಇದಲ್ಲದೇ ಭೈರಪ್ಪ ಅವರ ಮನೆಯ ಹಿಂಭಾಗದಲ್ಲಿ ಬರುವ ನವಿಲು ರಸ್ತೆಯಲ್ಲಿ ದೇವನೂರ ಮಹಾದೇವರ ನಿವಾಸ.
ಭೈರಪ್ಪ ಅವರು ಮಿತಭಾಷಿ, ಶಿಸ್ತಿನ ಸಿಪಾಯಿ. ವಾಯುವಿಹಾರ ಮತ್ತು ಕಾರು ಚಾಲನೆ ಅವರಿಗೆ ಅಚ್ಚುಮೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಯುವಿಹಾರ ಹಾಗೂ ಕಾರು ಚಾಲನೆ ಎರಡನ್ನೂ ಕಡಿಮೆ ಮಾಡಿದ್ದರು. ಅವರ ಮನೆಗೆ ಯಾರೇ ಹೋಗಬೇಕಿದ್ದರೂ ಪೂರ್ವಾನುಮತಿ ಪಡೆಯಬೇಕಿತ್ತು. ನೇರವಾಗಿ ಯಾರಾದರೂ ಹೋದರೆ ಸಿಟ್ಟಿಗೇಳುತ್ತಿದ್ದರು. ದೂರ್ವಾಸ ಮನಿಯಾಗುತ್ತಿದ್ದರು. ‘ನಾನು ಏನೋ ಬರೆಯುವುದರಲ್ಲಿ ನಿರತನಾಗಿರುತ್ತೇನೆ. ನನ್ನ ಮನೆಗಲ್ಲ, ಯಾರದೇ ಮನೆಗೆ ಹೋದರೂ ಮುಂಚಿತವಾಗಿ ತಿಳಿಸಿ ಹೋಗಿ’ ಎನ್ನುತ್ತಿದ್ದರು. ಮುಂಚಿತವಾಗಿ ತಿಳಿಸಿ ಹೋದರೆ ಆದರಿಂದ ಬರಮಾಡಿಕೊಂಡು, ಪ್ರೀತಿಯಿಂದ ಮಾತನಾಡಿ, ಸತ್ಕರಿಸಿ ಕಳುಹಿಸುತ್ತಿದ್ದರು.
ಅವರ ಮನೆಯ ಇರುವ ಉದಯರವಿ ರಸ್ತೆ ವಾಣಿಜ್ಯ ಮಳಿಗೆಗಳಿಂದ ಕೂಡಿದೆ. ಹೀಗಾಗಿ ಸದಾ ವಾಹನಗಳ ದಟ್ಟಣೆ. ಅವರ ಮನೆ ಮುಂದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲುಗಡೆ ಮಾಡಿದರೂ ಸಹಿಸುತ್ತಿರಲಿಲ್ಲ. ಕೊನೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಮನೆಯ ಗೇಟಿನ ಎದುರು ಇತರರ ವಾಹನ ನಿಲುಗಡೆ ಆಗದಂತೆ ನೋಡಿಕೊಂಡಿದ್ದರು.
ಭೈರಪ್ಪ ಅವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದವರಲ್ಲಿ ಕುವೆಂಪು ಭಾಷಾ ಭಾರತಿಯ ಪ್ರಥಮ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಖ್ಯಾತ ಹೃದ್ರೋಗತಜ್ಞ ಡಾ.ಲಕ್ಷ್ಮೀನಾರಾಯಣ್ ಪ್ರಮುಖರು. ಕಳೆದ ಹನ್ನೆರಡು ವರ್ಷಗಳಿಂದ ಮಾಜಿ ಸಂಸದ, ಅಂಕಣಕಾರ ಪ್ರತಾಪ್ ಸಿಂಹ ಕೂಡ ಹತ್ತಿರವಾಗಿದ್ದರು. ಪ್ರೊ.ಎಂ. ಕೃಷ್ಣೇಗೌಡ, ಪ್ರೊ.ನೀ. ಗಿರಿಗೌಡ, ಸಂಸ್ಕೃತಿ ಸುಬ್ರಹ್ಮಣ್ಯ, ಎಂ. ಚಂದ್ರಶೇಖರ್, ಎಸ್.ಎ. ರಾಮದಾಸ್, ಕೆ.ವಿ. ಮಲ್ಲೇಶ್ ಮತ್ತಿತರರಿಗೂ ಒಡನಾಟ ಇತ್ತು.
ಸಿಪಿಕೆ ಅವರ ಪುಸ್ತಕವೊಂದನ್ನು ಬಿಡುಗಡೆ ಮಾಡಲು ಅಂದಿನ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಭೈರಪ್ಪ ಅವರನ್ನು ಆಹ್ವಾನಿಸಲು ಹೋಗಿದ್ದರು. ನಾನು ಬರಲು ಆಗುವುದಿಲ್ಲ ಎಂದರು. ಆಗ ನಿಮ್ಮ ಮನೆಯಲ್ಲಿಯೇ ಬಿಡುಗಡೆ ಮಾಡಿ, ನಾಲ್ಕು ಮಂದಿ ಬರುತ್ತೇವೆ ಎಂದಾಗ ಭೈರಪ್ಪ ಒಪ್ಪಿದ್ದರು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುತ್ತೇವೆ ಎಂದಿದ್ದರು. ಅಂದಿನ ಲೋಕೋಪಯೋಗಿ ಮಂತ್ರಿ ಎಚ್.ಡಿ. ರೇವಣ್ಣ ಕೂಡ ಇದನ್ನು ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭೈರಪ್ಪ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಭಾರಿ ಸಂಖ್ಯೆಯಲ್ಲಿ ಬಂದಿದ್ದರು.ಇದನ್ನು ಕಂಡು ಭೈರಪ್ಪ ಅವರು ಆಕ್ಷೇಪ ತೆಗೆದರು. ಕೊನೆಗೆ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. ಇಂಗ್ಲಿಷ್ ಮಾಧ್ಯಮ ಶಾಲೆಗಳ ಬಗ್ಗೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ, ಇವತ್ತು ಪುಸ್ತಕ ಬಿಡುಗಡೆ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಇಂಗ್ಲಿಷ್ ಮಾಧ್ಯಮ ಶಾಲೆಗಳ ಬಗ್ಗೆ ಪ್ರತಿಕ್ರಿಯೆ ಬೇಕಾದರೆ ನಾಳೆ ಬನ್ನಿ ಎಂದು ಕಡ್ಡಿಮುರಿದಂತೆ ಹೇಳಿದ್ದರು. ಈ ರೀತಿ ಭೈರಪ್ಪ ಅವರಿದ್ದರು. ಅದರಂತೆ ನಡೆದುಕೊಂಡರೂ ಕೂಡ.
ಮಾಧ್ಯಮದವರು ಕೂಡ ಅವರಿಗೆ ಪ್ರಶ್ನೆಗಳನ್ನು ಕೇಳಬೇಕಾದರೆ ಪೂರ್ವತಯಾರಿ ಮಾಡಿಕೊಳ್ಳಬೇಕಿತ್ತು. ಇಲ್ಲದಿದ್ದರೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಮೂರನೇ ಅವಧಿಗಲ್ಲ ಮತ್ತೊಂದು ಅವಧಿಗೆ ಪ್ರಧಾನಿಯಾಗಲಿ ಎನ್ನುತ್ತಿದ್ದರು.
ಮುಂದಿನ ಹೊಸ ಕೃತಿ ಯಾವುದು? ಎಂದು ಕೇಳಿದರೆ ನಾನು ಪ್ರವಾಸ ಮಾಡದೇ, ಅಧ್ಯಯನ ಮಾಡದೇ ಯಾವುದೇ ಹೊಸ ಪುಸ್ತಕ ಬರೆಯುವುದಿಲ್ಲ ಎನ್ನುತ್ತಿದ್ದರು. ವಯೋಸಹಜ ಕಾರಣದಿಂದಾಗಿ ಇತ್ತೀಚೆಗೆ ಪ್ರವಾಸ ಮಾಡಲು ಸಾಧ್ಯವಾಗದಿರುವುದಕ್ಕೆ ಅವರಲ್ಲಿ ವಿಷಾದವಿತ್ತು.
ಇತ್ತೀಚಿನ ಕೆಲ ವೈದ್ಯರ ಬಗ್ಗೆ ಅವರಿಗೆ ಸಿಟ್ಟಿತ್ತು. ಕೆ.ಆರ್. ಆಸ್ಪತ್ರೆಯಲ್ಲಿ ಮೇಟಿಗುಡ್ ಎಂಬ ವೈದ್ಯರಿದ್ದರು. ಬಹಳ ಪ್ರಾಮಾಣಿಕರಿದ್ದರು. ಆದರೆ ಈಗಿನ ಕೆಲ ವೈದ್ಯರು ನನಗೆ ಆಗಬೇಕಿದ್ದು ಎರಡು ಪರೀಕ್ಷೆ. ಆದರೆ ಏಳು ಪರೀಕ್ಷೆ ಮಾಡಿಸುವಂತೆ ಲ್ಯಾಬ್‌ಗೆ ಚೀಟಿ ನೀಡಿದ್ದರು. ಇದರಲ್ಲೂ ಕಮಿಷನ್ ಉಂಟು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇತರೆ ಕೆಲ ಸಾಹಿತಿಗಳಂತೆ ಕರೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಹೋಗುತ್ತಿರಲಿಲ್ಲ. ಪ್ರಚಾರದಿಂದ ದೂರ ಇರುತ್ತಿದ್ದರು. ತಮಗೆ ಸಂಘಟಕರ ಬಗ್ಗೆ ನಂಬಿಕೆ ಬಂದಲ್ಲಿ ಹಾಗೂ ಸರಿ ಎನಿಸಿದಲ್ಲಿ ಮಾತ್ರ ಹೋಗುತ್ತಿದ್ದರು.