ರಾಜ್ಯದಲ್ಲಿ ನವಂಬರ್ ಕ್ರಾಂತಿ ಕೇವಲ ವದಂತಿ: ತಂಗಡಗಿ

| Published : Nov 02 2025, 03:15 AM IST

ರಾಜ್ಯದಲ್ಲಿ ನವಂಬರ್ ಕ್ರಾಂತಿ ಕೇವಲ ವದಂತಿ: ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಳೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ 473 ಹೆಕ್ಟೇರ್ ಹಾಗೂ ಅಕ್ಟೋಬರ್‌ನಲ್ಲಿ 1,900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ

ಕೊಪ್ಪಳ: ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುತ್ತಾರೆ ಎನ್ನುವ ವಿಷಯ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.

ವಿಪ ಸದಸ್ಯ ನಾಗರಾಜ ಯಾದವ್ ಅವರ ಪತ್ನಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಕುರಿತಂತೆ ಮಾತನಾಡಿದ ಸಚಿವರು, ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ, ಅವರು ಮರಾಠಿ ಜತೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ 473 ಹೆಕ್ಟೇರ್ ಹಾಗೂ ಅಕ್ಟೋಬರ್‌ನಲ್ಲಿ 1,900 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸುಮಾರು ₹15 ಕೋಟಿಯಷ್ಟು ಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತುಂಗಭದ್ರಾ ಡ್ಯಾಂನಿಂದ ಎರಡನೇ ಬೆಳೆಗೆ ನೀರು ಬಿಡುವ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಕೇಂದ್ರ ಜಲ ಆಯೋಗ ಒಂದೇ ಬೆಳೆಗೆ ನೀರು ಬಿಡುವುದಾಗಿ ನಿರ್ಧಾರ ಮಾಡಿದೆ. ಆದರೆ ಬಿಜೆಪಿ, ಜೆಡಿಎಸ್ ನಾಯಕರು ಸುಮ್ಮನೆ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ರೈತರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದರು.

ಡ್ಯಾಂನಲ್ಲಿ ಈಗ 80 ಟಿಎಂಸಿ ನೀರು ಇದೆ.‌ ಆದರೆ ಒಂದು ಬೆಳೆಗೆ ಕನಿಷ್ಟ 60 ಟಿಎಂಸಿ ನೀರು ಬೇಕು. ಈಗ ಇರುವ ನೀರಿನಲ್ಲಿ ಆಂಧ್ರ ಕೋಟಾ ಕೊಡಬೇಕು. ನಾಳೆ ನಮಗೆ ಕುಡಿಯಲು, ಕೈಗಾರಿಕೆ ಸೇರಿದಂತೆ ಜಲಚರಕ್ಕೆ ನೀರು ಉಳಿಸಬೇಕು. ಈಗ ನಾವು ರೈತರಿಗೆ ತಪ್ಪು ಮಾಹಿತಿ ನೀಡಿದರೆ ಬೇಸಿಗೆ ಸಮಯದಲ್ಲಿ ನೀರು ಕೊಡದಿದ್ದರೆ ಅಪಾರ ಪ್ರಮಾಣದಲ್ಲಿ ನಷ್ಟ ಆಗಲಿದೆ. ನ. 5 ರಂದು ವಾಟರ್ ಬೋರ್ಡ್ ಸಭೆ ನಡೆಯಲಿದ್ದು, ನ. 9 ಅಥವಾ 10 ರಂದು ಐಸಿಸಿ ಸಭೆ ನಿಗದಿಯಾಗಲಿದೆ. ನ. 21ರೊಳಗೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ನೀರಿನ ಬಗ್ಗೆ ಚರ್ಚೆ ಆಗಲಿದೆ ಎಂದರು.

ಡಿಸೆಂಬರ್ ಮೊದಲ ವಾರದೊಳಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ತಯಾರಾಗಲಿದೆ. ಅಣೆಕಟ್ಟಿನಲ್ಲಿ ನೀರಿನ ಮಟ್ಟ 1613 ಅಡಿ ತಲುಪಿದಾಗ ಗೇಟ್ ಅಳವಡಿಕೆ ಪ್ರಾರಂಭಿಸಲಾಗುವುದು. ಬೋರ್ಡ್ ಈಗಾಗಲೇ ಗೇಟ್ ಅಳವಡಿಕೆಗೆ ಒಂದು ವೇಳಾಪಟ್ಟಿ ರೆಡಿ ಮಾಡಿದೆ.‌ ಡಿಸೆಂಬರ್ ನಲ್ಲಿ ಗೇಟ್ ಅಳವಡಿಕೆ ಮಾಡಲಾಗುವುದು. ಆರು ತಿಂಗಳು ಗೇಟ್ ಅಳವಡಿಕೆ ಕಾಲಾವಕಾಶ ಕೇಳಿದ್ದು, ಅದರೊಳಗೆ ಕೆಲಸ ಪೂರ್ಣ ಮಾಡಲು ಹೇಳಿದ್ದೇವೆ ಎಂದರು.

ಎರಡನೇ ಬೆಳೆಗೆ ನೀರಿಲ್ಲ ಎಂದು ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ನಮಗೆ ಬೆಳೆಗಿಂತ ಡ್ಯಾಂ ಮುಖ್ಯ ಎಂದು ವಿರೋಧ ಪಕ್ಷದ ನಾಯಕರು ಅದಕ್ಕೆ ಒಪ್ಪಿಕೊಂಡಿದ್ದರು. ಈಗ ಮತ್ತೆ ಅದೇ ವಿಷಯ ರಾಜಕೀಯವಾಗಿ ಬಳಕೆ ಮಾಡುವುದು ಸೂಕ್ತವಲ್ಲ ಎಂದರು.