ನವೆಂಬರ್‌ ಕ್ರಾಂತಿ ಮಾಧ್ಯಮ ಸೃಷ್ಟಿ ಅಷ್ಟೇ: ಸಚಿವ ಜಮೀರ್‌

| Published : Oct 13 2025, 02:01 AM IST

ನವೆಂಬರ್‌ ಕ್ರಾಂತಿ ಮಾಧ್ಯಮ ಸೃಷ್ಟಿ ಅಷ್ಟೇ: ಸಚಿವ ಜಮೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವಸತಿ ಖಾತೆ ಸಚಿವ ಬಿ.ಝೆಡ್. ಜಮೀರ್ ಅಹಮದ್‌ ಖಾನ್ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯ ಸರ್ಕಾರದಲ್ಲಿ ನವಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬುದು ಶುದ್ಧ ಸುಳ್ಳು. ಇದೆಲ್ಲ ಮಾಧ್ಯಮ ಸೃಷ್ಟಿ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ವಸತಿ ಖಾತೆ ಸಚಿವ ಬಿ.ಝೆಡ್. ಜಮೀರ್ ಅಹಮದ್‌ ಖಾನ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನನಗೂ ಸಿಎಂ ಆಗುವ ಬಯಕೆಯಿದೆ ಎಂಬ ಗೃಹ ಸಚಿವ ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲರಿಗೂ ಸಹಜವಾಗಿ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ. ಅದರಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕೂಡ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏನೇ ಇದ್ದರೂ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದ್ದು, ಆ ನಿರ್ಧಾರಕ್ಕೆ ನಾವು ಬದ್ಧ ಎಂದರು.

ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆ ಆಗಲಿದೆ, ಹೊಸಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪಕ್ಷದಲ್ಲಿ ಅರ್ಧಕ್ಕೂ ಹೆಚ್ಚು ಶಾಸಕರು ಮೂರು-ನಾಲ್ಕು ಬಾರಿ ಆಯ್ಕೆಯಾದವರಿದ್ದಾರೆ. ಅವರಿಗೂ ಸಚಿವರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದೆಲ್ಲವನ್ನೂ ಗಮನಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.ಸ್ಟಾಂಪ್‌ ಪೇಪರಲ್ಲಿ ಬರೆದುಕೊಡುವೆ ಸಿದ್ದು 5 ವರ್ಷ ಸಿಎಂ: ದರ್ಶನಾಪುರ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‌ಸಿಎಂ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಐದು ವರ್ಷ ಅಧಿಕಾರ ಪೂರೈಸುತ್ತಾರೆ. ಬೇಕಿದ್ದರೆ, ಸ್ಟಾಂಪ್ ಪೇಪರ್ ಮೇಲೆ ಬರೆದು ಕೊಡುತ್ತೀನಿ ಎಂದು ಸಚಿವ ದರ್ಶನಾಪುರ ತಿಳಿಸಿದ್ದಾರೆ. ಯಾದಗಿರಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ಐದು ವರ್ಷ ಸಿಎಂ ಆಗಿ ನಾನೇ ಇರುತ್ತೇನೆ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ, ಡಿಕೆಶಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಹೈಕಮಾಂಡ್‌ ಕೂಡ ಎಲ್ಲಿಯೂ ಸಿಎಂ ಬದಲಾವಣೆ ಮಾಡುವುದಾಗಿ ಹೇಳಿಲ್ಲ ಎಂದರು.

ಸಚಿವ ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯಿಸಿ, ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ. ಸಿಎಂ ಅವರು ಯಾವಾಗ ಬೇಕಾದರೂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.