ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕುಂದುಕೊರತೆ/ದೂರುಗಳ ಪರಿಣಾಮಕಾರಿ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ‘ಐಪಿಜಿಆರ್‌ಎಸ್‌ 2.0 ತಂತ್ರಾಂಶ’ ಅಭಿವೃದ್ಧಿಗೆ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ.

ಮೋಹನ ಹಂಡ್ರಂಗಿ

 ಬೆಂಗಳೂರು : ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಕುಂದುಕೊರತೆ/ದೂರುಗಳ ಪರಿಣಾಮಕಾರಿ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ‘ಐಪಿಜಿಆರ್‌ಎಸ್‌ 2.0 ತಂತ್ರಾಂಶ’ ಅಭಿವೃದ್ಧಿಗೆ ಇದೀಗ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಕರ್ನಾಟಕವನ್ನು ನಾಗರಿಕ ಕೇಂದ್ರಿತ ಡಿಜಿಟಲ್‌ ಆಡಳಿತದಲ್ಲಿ ಮುಂಚೂಣಿಗೆ ತರುವ ಉದ್ದೇಶದಿಂದ ಸಾರ್ವಜನಿಕರ ಕುಂದು-ಕೊರತೆಗಳ ಪರಿಣಾಮಕಾರಿ ನಿರ್ವಹಣೆಗೆ ‘ಐಪಿಜಿಆರ್‌ಎಸ್‌ 2.0 ತಂತ್ರಾಂಶ’ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸುವ ಘೋಷಣೆ ಮಾಡಿತ್ತು. ಅದರಂತೆ ಈಗ 98 ಲಕ್ಷ ರು. ಅನುದಾನ ಬಿಡುಗಡೆಗೊಳಿಸುವ ಮುಖಾಂತರ ಬಜೆಟ್‌ನಲ್ಲಿ ನೀಡಲಾಗಿದ್ದ ಭರವಸೆ ಈಡೇರಿಕೆಗೆ ಚಾಲನೆ ನೀಡಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ) ಅಧೀನ ಸಂಸ್ಥೆಗಳಾದ ಇ-ಆಡಳಿತ ಕೇಂದ್ರ ಮತ್ತು ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಜಂಟಿಯಾಗಿ ಈ ಎಐ ಚಾಲಿತ ತಂತ್ರಜ್ಞಾನ ಆಧಾರಿತ ಐಪಿಜಿಆರ್‌ಎಸ್‌ 2.0 ತಂತ್ರಾಂಶ ಅಭಿವೃದ್ಧಿಪಡಿಸಲಿವೆ.

ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರು ತಮ್ಮ ಕುಂದುಕೊರತೆ/ದೂರುಗಳನ್ನು ದಾಖಲಿಸಲು 2021ರ ನವೆಂಬರ್‌ನಲ್ಲೇ ‘ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ’(ಐಪಿಜಿಆರ್‌ಎಸ್‌) ಅನುಷ್ಠಾನಗೊಳಿಸಿತ್ತು. ಇದೀಗ ಅದನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಎಐ ಚಾಲಿತ ತಂತ್ರಜ್ಞಾನ ಒಳಗೊಂಡ ಐಪಿಜಿಆರ್‌ಎಸ್‌ 2.0 ತಂತ್ರಾಂಶ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಿಂದ ದೂರು ಸಲ್ಲಿಕೆ, ದೂರಿನ ಸ್ಥಿತಿಗತಿ, ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಯುವುದು ಮತ್ತಷ್ಟು ಸುಲಭವಾಗಲಿದೆ.

ಏನಿದು ಐಪಿಜಿಆರ್‌ಎಸ್‌ ತಂತ್ರಾಂಶ?:

ಐಪಿಜಿಆರ್‌ಎಸ್‌ ತಂತ್ರಾಂಶದಲ್ಲಿ 40ಕ್ಕೂ ಅಧಿಕ ಇಲಾಖೆಗಳ ಯೋಜನೆಗಳು/ಸೇವೆಗಳಿಗೆ ಸಂಬಂಧಿಸಿ ಸಾರ್ವಜನಿಕರು ತಮ್ಮ ದೂರು ದಾಖಲಿಸಬಹುದು. ಸಾರ್ವಜನಿಕರು ಐಪಿಜಿಆರ್‌ಎಸ್‌ ಪೋರ್ಟಲ್‌ನಲ್ಲಿ ಮೊಬೈಲ್‌ ಸಂಖ್ಯೆ ಹಾಕಿದ ಬಳಿಕ ಒಟಿಪಿ ಬರಲಿದೆ. ಆ ಒಟಿಪಿ ಬಳಸಿಕೊಂಡು ನೋಂದಣಿಯಾಗಬೇಕು. ನಂತರ ತಮ್ಮ ದೂರು ದಾಖಲಿಸಬೇಕು. ತರುವಾಯ ಈ ದೂರನ್ನು ಪರಿಹರಿಸಲು ಸಂಬಂಧಿತ ಇಲಾಖೆ ಅಧಿಕಾರಿಗೆ ಕಳುಹಿಸಲಾಗುತ್ತದೆ.

ಅದನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿ ಕೈಗೊಂಡ ಕ್ರಮದ ಬಗ್ಗೆ ಪೋರ್ಟಲ್‌ನಲ್ಲಿ ವರದಿ ಸಲ್ಲಿಸಲ್ಲಿದ್ದಾರೆ. ಈ ಕುರಿತು ಎಸ್‌ಎಂಎಸ್‌ ಮುಖಾಂತರ ದೂರುದಾರನಿಗೆ ಮಾಹಿತಿ ನೀಡಲಾಗುತ್ತದೆ. ಈ ನಡುವೆ ದೂರುದಾರ ಮೊಬೈಲ್‌ ಸಂಖ್ಯೆ ಬಳಸಿಕೊಂಡು ತಮ್ಮ ದೂರಿನ ಸ್ಥಿತಿಗತಿ ತಿಳಿಯಲು ಅವಕಾಶವಿದೆ.

ಕುಂದುಕೊರತೆ ನಿವಾರಣಾ ಪ್ರಕ್ರಿಯೆಯ ಗುಣಮಟ್ಟ ಮತ್ತು ಒದಗಿಸಿದ ಪರಿಹಾರ ಕುರಿತು ಸಹಾಯವಾಣಿಯಿಂದ ಕರೆ ಮಾಡಿ ದೂರುದಾರನ ಪ್ರತಿಕ್ರಿಯೆ ಪಡೆಯಲಾಗುತ್ತದೆ. ದೂರುದಾರ ಕ್ರಮದ ಬಗ್ಗೆ ತೃಪ್ತರಾಗದಿದ್ದಲ್ಲಿ ಅಥವಾ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಆ ದೂರನ್ನು ಪರಿಹರಿಸಲು ಮುಂದಿನ ಹಂತದ ಅಧಿಕಾರಿಗಳ ಲಾಗಿನ್‌ಗೆ ಕಳುಹಿಸಲಾಗುತ್ತದೆ.

ಸಿಎಸ್‌ ಅಧ್ಯಕ್ಷತೆಯ ಸಮಿತಿಯಿಂದ ನಿಗಾ

ಐಪಿಜಿಆರ್‌ಎಸ್‌ ಪೋರ್ಟಲ್‌ ಮುಖಾಂತರ ಸಲ್ಲಿಕೆಯಾಗುವ ಕುಂದು ಕೊರತೆಗಳು/ದೂರುಗಳ ಸಂಬಂಧ ಕ್ಷೇತ್ರಮಟ್ಟದ ಅನುಷ್ಠಾನಾಧಿಕಾರಿಗಳು ಕೈಗೊಳ್ಳುವ ಕ್ರಮದ ಗುಣಮಟ್ಟ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಪರಿಶೀಲನಾ ಸಮಿತಿ ಹಾಗೂ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಅಧಿಕಾರಿಗಳ ಕಾರ್ಯ ವೈಖರಿ ಮೇಲೆ ನಿಗಾ ವಹಿಸುತ್ತಿದೆ.