ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಫೆಬ್ರವರಿ 23ರಂದು ನಗರ ಹೊರವಲಯದ ಅಗಲಗುರ್ಕಿಯ ರಾಷ್ಟ್ರೀಯ ಹೆದ್ದಾರಿ- 44ರ ಬಳಿ ನಡೆಯುತ್ತಿರುವ ರಾಜ್ಯ ಸರ್ಕಾರದ ನರೇಗಾ ಬಚಾವ್ ಸಂಗ್ರಾಮ್ ಆಂದೋಲನಕ್ಕೆ ಚಿಕ್ಕಬಳ್ಳಾಪುರದಿಂದ ಚಾಲನೆ ನೀಡಲಾಗುತ್ತಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.10- 15 ಎಕರೆ ವಿಸ್ತಾರದ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚುಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಶಾಸಕ ಪ್ರದೀಪ್ ಈಶ್ವರ್ ಮತ್ತು ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು.
ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನರೇಗಾ ಬಚಾವ್ ಸಂಗ್ರಾಮ್ ಆಂದೋಲನದ ಈ ಕಾರ್ಯಕ್ರಮ ಪ್ರದೇಶ ಕಾಂಗ್ರೆಸ್ ಪಕ್ಷ ಮತ್ತು ಶಾಸಕನಾಗಿ ನನಗೆ, ಸಚಿವರಾಗಿ ಡಾ.ಎಂ.ಸಿ.ಸುಧಾಕರ್ ರಿಗೆ ಪ್ರತಿಷ್ಠೆಯಾಗಿದೆ. ಕಾರಣ ನಮ್ಮ ಜಿಲ್ಲೆಯಲ್ಲಿಯೇ ಇಂತಹ ಕಾರ್ಯಕ್ರಮ ನಡೆಸುವ ಅವಕಾಶವನ್ನು ಪಕ್ಷವು ನಮಗೆ ನೀಡಿದೆ. ಮಹಾತ್ಮನಿಗೆ ಗೌರವ ಸಲ್ಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿ ದೇಶಕ್ಕೆ ನರೇಗಾ ಯೋಜನೆ ಬದಲಾವಣೆಯಿಂದ ಹೊಸ ರೂಪದಲ್ಲಿ ಬಂದಿರುವ ವಿಬಿ ಜಿ ರಾಮ್ ಜಿ ಕಾರ್ಯಕ್ರಮದ ಹುನ್ನಾರಗಳನ್ನು ಜನತೆಗೆ ತಿಳಿಸಲು ಅವಕಾಶವಾಗುತ್ತಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ನರೇಗಾ ಬಚಾವ್ ಸಂಗ್ರಾಮ್ ಆಂದೋಲನದ ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ನರೇಗಾ ಜಾಬ್‌ಕಾರ್ಡ್ ಹೊಂದಿರುವ 50 ರಿಂದ 1 ಲಕ್ಷ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಈ ಯೋಜನೆಯನ್ನು, ಕೇಂದ್ರ ಸರ್ಕಾರ ವಾಪಸ್ಸು ಪಡೆದು ಹೊಸದಾಗಿ ವಿಬಿ ಜಿ ರಾಮ್ ಜಿ ಯೋಜನೆ ಮೂಲಕ ಸೃಷ್ಟಿಸಿರುವ ಅಭದ್ರತೆಯನ್ನು ತಿಳಿಸಲಾಗುವುದು ಎಂದರು.
ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಂದ್ರಶೇಖರ್ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದ ಬಗ್ಗೆ ದೇಶವಾಸಿಗಳಿಗೆ ಎಳೆಎಳೆಯಾಗಿ ತಿಳಿಸಿ ಹೇಳಬೇಕಿದೆ. ಮೂರು ಜಿಲ್ಲೆಗಳ ಪಕ್ಷದ ಮುಖಂಡರು, ಕಾರ್ಯಕರ್ತರು, ಶಾಸಕರು, ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುವ ಮೂಲಕ ಪಕ್ಷದ ಬಲಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.
ಎಐಸಿಸಿ ಯುವ ಕಾಂಗ್ರೆಸ್ ನಾಯಕ ಎಸ್.ರಕ್ಷಾರಾಮಯ್ಯ, ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ವಿಧಾನಪರಿಷತ್ ಸದಸ್ಯ ವಿ.ಆರ್.ಸುದರ್ಶನ್, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.