ಸಾರಾಂಶ
ಯಲಬುರ್ಗಾ:
ನರೇಗಾ ನೌಕರರ ಆರು ತಿಂಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘ ಮತ್ತು ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ತಾಲೂಕು ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಆರಂಭವಾಗಿದೆ.ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂತೋಷ ನಂದಾಪುರ ಮಾತನಾಡಿ, ಕಳೆದ ೧೫ ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ ೫೦೦೦ಕ್ಕಿಂತ ಹೆಚ್ಚು ನೌಕರರು ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಸೌಲಭ್ಯ ಇಲ್ಲ. ಜತೆಗೆ ಆರು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ರಾಜ್ಯ ಸರ್ಕಾರ ನೌಕರರ ವೇತನ ಪಾವತಿಸುವಲ್ಲಿ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡುತ್ತಿದೆ. ಇದರಿಂದ ನೌಕರರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ಆರಂಭಿಸಲಾಗಿದೆ ಎಂದರು.
ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ತಾಲೂಕು ಅಧ್ಯಕ್ಷ ಬಸಟೆಪ್ಪ ಮಾತನಾಡಿ, ಬಿಎಫ್‌ಟಿಗಳ ಪ್ರತಿ ವರ್ಷದ ನವೀಕರಣ ಪದ್ಧತಿ ಕೈಬಿಡಬೇಕು. ಬಿಎಫ್‌ಟಿಗಳ ವೇತನ ಪಾವತಿಯಲ್ಲಿ ಗೌರವಧನ ನೀಡುತ್ತಿದ್ದು, ಇದನ್ನು ವೇತನ ರೂಪದಲ್ಲಿ ನೀಡಬೇಕು. ಪ್ರತಿ ತಿಂಗಳ ವೇತನ ಸರಿಯಾಗಿ ಆಗದೆ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಗ್ರಾಮ ಕಾಯಕ ಮಿತ್ರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷೆ ಶಾಂತಾ ಅಂಗಡಿ, ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಸವರಾಜ ದೊಡ್ಮನಿ, ಶರಣಪ್ಪ ಹಾಳಕೇರಿ, ವಿನಯಾ, ಮಂಜುನಾಥ, ಪ್ರಸಾದ, ವಿಜಯಕುಮಾರ ಬಂಡಿ, ವಿಜಯಕುಮಾರ ಬಳಿಗಾರ, ಸಂಗಮೇಶ ಜಡಿಮಠ, ಕಿರಣಕುಮಾರ, ವಿಜಯ ರಾಮಶೆಟ್ಟಿ, ನಾಗರಾಜ ಹಳ್ಳಿ, ನೇತ್ರಾವತಿ, ಸಂಜೀವಕುಮಾರ, ಚೇತನ, ಮಂಜುನಾಥ, ರವಿರಾಜ ಹುಲಿ ಹಾಗೂ ಸಮುದಾಯ ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು ಧರಣಿಯಲ್ಲಿ ಪಾಲ್ಗೊಂಡಿದ್ದರು.