ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಹಾಗೂ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವುದು ಗ್ರಾಮೀಣ ಮುಗ್ದ ಜನರಿಗೆ ಅನ್ಯಾಯವಾಗಿದೆ
ಹರಪನಹಳ್ಳಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಹಾಗೂ ಯೋಜನೆಯ ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವುದು ಗ್ರಾಮೀಣ ಮುಗ್ದ ಜನರಿಗೆ ಅನ್ಯಾಯವಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅವರು ನಗರದ ಸ.ಪ.ಪೂ ಕಾಲೇಜಿನ ಮುಂಭಾಗ ತಾಲೂಕು ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ನರೇಗಾ ಬಚಾವ್ ಬೃಹತ್ ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.ಗುಜರಾತ್ ನಲ್ಲಿ ಹುಟ್ಟಿ ಬೆಳೆದವರಿಂದಲೇ ಗಾಂಧೀಜಿಯವರಿಗೆ ಅವಮಾನವಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ತಂದಿರುವ ಹೊಸ ನರೇಗಾ ಕಾಯ್ದೆಯಿಂದ ನಿಜವಾದ ಕೂಲಿಕಾರರಿಗೆ ತೊಂದರೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ನೂರು ಸುಳ್ಳು ಸತ್ಯ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷ ದೇಶ ಆಳಿದ್ದಾರೆ. ಆದರೆ ದೇಶ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.ನೆಹರು ಅವರಿಂದ ಹಿಡಿದು ಮನಮಹೋಹನ್ ಸಿಂಗವರೆಗೂ ಕೇವಲ ₹57 ಲಕ್ಷ ಕೋಟಿ ಸಾಲವಿದಿದ್ದರೆ, ನರೇಂದ್ರ ಮೋದಿ ಬಂದ ನಂತರ ₹250 ಲಕ್ಷ ಕೋಟಿಗೆ ಸಾಲ ಏರಿಕೆಯಾಗಿದೆ. ಪ್ರತಿಯೊಬ್ಬ ಬಾರತೀಯನ ತಲೆಯ ಮೇಲೆ ₹2.65 ಲಕ್ಷ ಸಾಲ ಹೊರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡುವುದು ಬಿಟ್ಟು ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಹೊಸ ಯೋಜನೆಗಳಿಲ್ಲ, ಖಾಸಗೀಕರಣ ಹಾಗೂ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಹೆಸರು ಬದಲಾವಣೆ ಮಾಡುವುದಷ್ಟೇ ಮೋದಿಯವರ ಕೆಲಸವಾಗಿದೆ. ದೇಶದಲ್ಲಿ ಮನರೇಗಾ ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಎಲ್. ಪೋಮ್ಯನಾಯ್ಕ ಮಾತನಾಡಿ, ಮನರೇಗಾ ಹೆಸರು ಬದಲಾವಣೆ ಹಾಗೂ ಮೂಲ ಸ್ವರೂಪ ಬದಲಾವಣೆ ಮಾಡಿ ಖಾತ್ರಿ ಯೋಜನೆಯ ಆಶಯವನ್ನು ವಿಪಲಗೊಳಿಸಿದ್ದಾರೆ. ದೇಶದ ಬಡ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದರು.ವಕೀಲ ಬಸವರಾಜ ಸಂಗಪ್ಪನವರ ಮಾತನಾಡಿ, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ರಾಮನ ಋಣ ತೀರಿಸಲು ಯೋಜನೆಗೆ ರಾಮನ ಹೆಸರನ್ನು ಸೇರಿಸಿದ್ದಾರೆ. ಗ್ರಾಮಗಳನ್ನು ದುರ್ಬಲಗೊಳಿಸಲು ಈ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಇಸ್ಮಾಯಿಲ್ ಎಲಿಗಾರ ಮಾತನಾಡಿ ಕಾಂಗ್ರೆಸ್ ಪಕ್ಷ ಸಮಾನತೆ, ಸಾಮರಸ್ಯ ಕಾಪಾಡಿಕೊಂಡು ಹೋಗುತ್ತಿದೆ, ಬಿಜೆಪಿ ಶಾಂತಿ ಹಾಳು ಮಾಡುವುದರ ಜೊತೆಗೆ ಇಂತಹ ಉತ್ತಮ ನರೇಗಾ ಯೋಜನೆಯನ್ನು ಮೂಲೆ ಗುಂಪು ಮಾಡಲು ಹೊರಟಿದೆ ಎಂದು ಹೇಳಿದರು.ಮುಖಂಡ ಶಶಿಧರ ಪೂಜಾರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯುವ ಕೆಲಸ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ ಎಂದು ತಿಳಿಸಿದರು. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ, ಕಾಂಗ್ರೆಸ್ ಮುಖಂಡ ಹಲಗೇರಿ ಮಂಜಪ್ಪ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ವಕೀಲ ವೆಂಕಟೇಶ, ಅಗ್ರಹಾರ ಅಶೋಕ, ಜಿಷಾನ್ ಮಾತನಾಡಿ ಮನ ನರೇಗಾ ಬದಲಾವಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉದಯಶಂಕರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಲಾಟಿ ದಾದಾಪೀರ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣನಾಯ್ಕ, ಕಾಂಗ್ರೆಸ್ ಉಪಾಧ್ಯಕ್ಷ ಶಶಿಕುಮಾರ ನಾಯ್ಕ, ಅಬ್ದುಲ್ ರಹಿಮಾನ್, ತಾಪಂ ಮಾಜಿ ಸದಸ್ಯರಾದ ಮೈದೂರು ರಾಮಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಹಲುವಾಗಲು ವನಜಾಕ್ಷ್ಮಮ್ಮ, ರತ್ನಮ್ಮ, ಸುಮಾ ಜಗದೀಶ, ಚಿಕ್ಕೇರಿ ಬಸಪ್ಪ, ಶಮಿಉಲ್ಲಾ ಎಸ್.ಕೆ., ನೀಲಗುಂದ ವಾಗೀಶ, ಕನಕನ ಬಸ್ಸಾಪುರ ಮಂಜುನಾಥ, ಎಂ.ವಿ.ಕೃಷ್ಣ, ಕಂಚಿಕೇರಿ ಅಂಜಿನಪ್ಪ, ಮಂಜನಾಯ್ಕ, ಪ್ರಸಾದ್ ಕಾವಡಿ, ಮತ್ತೂರು ಬಸವರಾಜ, ಎನ್.ಶಂಕರ, ಶಿವಪುತ್ರ ಧರಣಿಯಲ್ಲಿ ಪಾಲ್ಗೊಂಡಿದ್ದರು.