ನರೇಗಾ ಹೊರಗುತ್ತಿಗೆ ನೌಕರರಿಗಿಲ್ಲ 4 ತಿಂಗಳಿಂದ ವೇತನ!

| Published : Nov 14 2025, 03:00 AM IST

ಸಾರಾಂಶ

ಈ ಮೊದಲು ಹೊಸ ಸಾಫ್ಟ್‌ವೇರ್ ಅಳವಡಿಕೆ ಮತ್ತು ಕೆ- 2 ಮ್ಯಾಪಿಂಗ್ ಪ್ರಕ್ರಿಯೆ ಪ್ರಾರಂಭದಿಂದ ತೊಂದರೆ ಅನುಭವಿಸಿದ್ದ ನೌಕರರೀಗ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನವನ್ನು ಜಿಲ್ಲಾಡಳಿತ ಯಾವುದೇ ಸಕಾರಣವಿಲ್ಲದೇ ಬಾಕಿ ಉಳಿಸಿಕೊಂಡಿದ್ದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ಶಿವಕುಮಾರ ಕುಷ್ಟಗಿ

ಗದಗ: ಗ್ರಾಮೀಣ ಜನರ ಬದುಕಿಗೆ ಉದ್ಯೋಗದ ಭರವಸೆಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ 4 ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ.

ಈ ಮೊದಲು ಹೊಸ ಸಾಫ್ಟ್‌ವೇರ್ ಅಳವಡಿಕೆ ಮತ್ತು ಕೆ- 2 ಮ್ಯಾಪಿಂಗ್ ಪ್ರಕ್ರಿಯೆ ಪ್ರಾರಂಭದಿಂದ ತೊಂದರೆ ಅನುಭವಿಸಿದ್ದ ನೌಕರರೀಗ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನವನ್ನು ಜಿಲ್ಲಾಡಳಿತ ಯಾವುದೇ ಸಕಾರಣವಿಲ್ಲದೇ ಬಾಕಿ ಉಳಿಸಿಕೊಂಡಿದ್ದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ಜಿಲ್ಲಾ ಮಟ್ಟದಲ್ಲಿ 27 ಡಿಎಂಐಎಸ್, 27 ಜಿಲ್ಲಾ ಅಕೌಂಟ್ ಮ್ಯಾನೇಜರ್, 209 ತಾಂತ್ರಿಕ ಸಂಯೋಜಕರು, 222 ತಾಲೂಕು ಎಂಬಿಎಸ್, 194 ಬಿಜಿ ಸಂಯೋಜಕರು, 152 ಗ್ರಾಮ ಪಂಚಾಯಿತಿ ಸಹಾಯಕರು, 299 ಬಿಎಲ್‌ಆರ್‌ಪಿ ಮತ್ತು 799 ತಾಂತ್ರಿಕ ಸಹಾಯಕರು(ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳು) ಸೇರಿ ಸಾವಿರಾರು ಮಂದಿ ಪ್ರತಿ ತಿಂಗಳು ₹15ರಿಂದ ₹45 ಸಾವಿರದವರೆಗೆ ವೇತನ ಪಡೆಯುತ್ತಿದ್ದರು. ಆದರೆ ಈಗ ಈ ಹಣವೂ ಬಾರದ್ದರಿಂದ ಮನೆ ಬಾಡಿಗೆ, ಇಎಂಐ, ಮಕ್ಕಳ ಶಾಲಾ ಫೀಸ್ ಕಟ್ಟಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿಯೂ 150ಕ್ಕೂ ಹೆಚ್ಚು ನೌಕರರು ವೇತನ ವಿಳಂಬದಿಂದ ಬಳಲುತ್ತಿದ್ದಾರೆ. ಜೂನ್ ತಿಂಗಳಿನಿಂದಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನರೇಗಾ ಎಲ್ಲ ಸಿಬ್ಬಂದಿ ವರ್ಗ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. 1 ವರ್ಷದಿಂದ ತಾಂತ್ರಿಕ ಸಿಬ್ಬಂದಿಗೆ ಟಿಎ ಹಣ ಪಾವತಿಯಾಗಿಲ್ಲ. ದೀಪಾವಳಿ ಹಬ್ಬಕ್ಕೆ ವೇತನ ಪಾವತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನರೇಗಾ ಸಿಬ್ಬಂದಿಗೆ ದೀಪಾವಳಿ ಹಬ್ಬ ಸಂತಸ ತರಲಿಲ್ಲ. ಹಬ್ಬದ ಬಳಿಕವೂ ವೇತನ ಪಾವತಿಗೆ ಗ್ರಹಣ ಹಿಡಿದಿರುವುದು ಜಿಲ್ಲೆಯ ನರೇಗಾ ನೌಕರರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹದಗೆಡಿಸಿದೆ. ನೌಕರರನ್ನು ಕೆ- 2 ಪೋರ್ಟಲ್‌ನಲ್ಲಿ ಮ್ಯಾಪಿಂಗ್ ಮಾಡಿದ ನಂತರ ಬಿಲ್ ತಯಾರಿಸಬೇಕು. ಜಿಲ್ಲಾ ಮಟ್ಟದ ಸಿಇಒ, ಸಹಿ ಪಡೆದು ಕೆ- 2ಗೆ ಕಳುಹಿಸಬೇಕು. ಅಲ್ಲಿ ಹಿರಿಯ ಅಧಿಕಾರಿಗಳ ಸಹಿ, ಸ್ಕಾಲರ್‌ಶಿಪ್ ಚೈನ್ ಮೂಲಕ ಆನ್‌ಲೈನ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅನುದಾನ ಬಿಡುಗಡೆಯಾದ ನಂತರ ಮಾತ್ರ ವೇತನ ಬರುತ್ತದೆ. ಹೀಗಾಗಿ ಸಂಕಷ್ಟ ಎದುರಾಗಿದೆ. ಆಧಾರ್ ಐಟಿ ಮ್ಯಾಪಿಂಗ್ ಸಮಯದಲ್ಲೂ ಇದೇ ರೀತಿ ವಿಳಂಬವಾಗಿತ್ತು. ಈಗ ಹೊಸ ಸಾಫ್ಟ್‌ವೇರ್‌ನಿಂದ ಮತ್ತಷ್ಟು ತಲೆನೋವು ಎದುರಾಗಿದೆ. ಕೆಲಸದ ಒತ್ತಡ ಹೆಚ್ಚಿದೆ. ವೇತನವಿಲ್ಲದ್ದರಿಂದ ಸಾಲದ ಬಡ್ಡಿ ಹೆಚ್ಚಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಆಯುಕ್ತರು ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವುದು ನರೇಗಾ ನೌಕರರ ಅಳಲಾಗಿದೆ.ಗದಗ ಜಿಪಂ ಸಿಇಒ ಆಗಿದ್ದ ಭರತ್ ಎಸ್. ಅವರು ವರ್ಗಾವಣೆಗೊಂಡು ಎರಡು ತಿಂಗಳು ಕಳೆದಿವೆ. ಭರತ್ ಅವರ ವರ್ಗಾವಣೆ ಬಳಿಕ ಗದಗ ಜಿಲ್ಲಾಧಿಕಾರಿ ಶ್ರೀಧರ್ ಅವರಿಗೆ ಜಿಪಂ ಸಿಇಒ ಪ್ರಭಾರ ಹುದ್ದೆಗೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗಳು ಗದಗ ಸಿಇಒ ಆಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕಳೆದರೂ ಜಿಲ್ಲಾ ಪಂಚಾಯಿತಿ ನರೇಗಾ ಸಿಬ್ಬಂದಿ ನೂತನ ಸಿಇಒ ಅವರ ಡೊಂಗಲ್(ಡಿಜಿಟಲ್ ಸಹಿ) ಮಾಡಿಸದೇ ಇರುವುದು ವೇತನ ಪ್ರಕ್ರಿಯೆ ಪೂರ್ಣಗೊಳಿಸಲು ಹಿನ್ನಡೆಯಾಗಿದೆ. ತಿಂಗಳ ಹಿಂದೆಯೇ ಜಿಲ್ಲಾ ಡಿಡಿಒ ಖಾತೆಗೆ ಅನುದಾನ ಬಿಡುಗಡೆಯಾಗಿದ್ದರೂ ಸಕಾಲದಲ್ಲಿ ನರೇಗಾ ಸಿಬ್ಬಂದಿಗೆ ವೇತನ ಪಾವತಿಗೆ ಕ್ರಮ ವಹಿಸದೇ ಇರುವುದು ವಿಪರ್ಯಾಸವೆನಿಸಿದೆ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ತಾಂತ್ರಿಕ ಸಮಸ್ಯೆ ಇಲ್ಲ: ಕೇಂದ್ರ ಸರ್ಕಾರದ ಅನುದಾನದ ಬಿಡುಗಡೆ ನಂತರ ಶೀಘ್ರವಾಗಿ ಸಂಬಳ ಬಿಡುಗಡೆ ಮಾಡಲಾಗುತ್ತಿದೆ. ಕೆ- 2 ಮ್ಯಾಪಿಂಗ್ ಸಮಸ್ಯೆ ಬಗೆಹರಿದಿದೆ. ಆದಷ್ಟು ಬೇಗ ನೇರಗಾ ನೌಕರರ ಹಣ ಬಿಡುಗಡೆ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಇಲ್ಲ ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿದರು.