ಸಾರಾಂಶ
ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸಿಇಒಕನ್ನಡಪ್ರಭ ವಾರ್ತೆ ಕೊಪ್ಪಳ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿಯಿಂದ ದೊರೆಯುವ ಕೂಲಿ ಹಣವು ಆರ್ಥಿಕ ಸಧೃಡತೆಗೆ ದಾರಿಯಾಗಿದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.ತಾಲೂಕಿನ ಇರಕಲ್ಲಗಡಾ ಗ್ರಾಮ ಪಂಚಾಯಿತಿಯಿಂದ ಯಲಮಗೇರಾ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಸಾಮುದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ದನದ ಶೆಡ್, ಕುರಿ ಶೆಡ್, ಕೋಳಿ ಶೆಡ್, ಹಂದಿ ಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ ಕಾಮಗಾರಿ ಅನುಷ್ಠಾನ ಮಾಡಿಕೊಂಡು ಆರ್ಥಿಕ ಸಬಲರಾಗಬಹುದು. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸವನ್ನು ನೀಡಲಾಗುತ್ತದೆ. ನರೇಗಾ ಯೋಜನೆ ಜಾರಿಯಾಗಿ ಫೆ. 2ಕ್ಕೆ 19 ವರ್ಷಗಳು ಗತಿಸಿದ್ದು ಯೋಜನೆಯಿಂದ ಬಡಕುಟುಂಬಗಳು ಸಾಕಷ್ಟು ಪ್ರಯೋಜನೆ ಪಡೆದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡತನ ನಿವಾರಣೆಯತ್ತ ಹೆಜ್ಜೆ ಇಟ್ಟಿದೆ.ಕೂಲಿಕಾರರಾದ ಪತಿ ನಿಂಗಪ್ಪ ಮತ್ತು ಪತ್ನಿ ನಿಂಗಮ್ಮ ಕಾಮನೂರು ನರೇಗಾದಡಿ ಬಹಳಷ್ಟು ವರ್ಷದಿಂದ ಕೂಲಿ ಕೆಲಸ ಮಾಡುತ್ತಾ ಬಂದಿದ್ದು, ಇಂತವರಿಗೆ ಯೋಜನೆ ಬಹಳಷ್ಟು ಅನುಕೂಲವಾಗಿದೆ. ಇಂತವರಿಗೆ ವಸತಿ ಯೋಜನೆಯಡಿ ಆಯ್ಕೆ ಮಾಡಲು ಆದ್ಯತೆ ನೀಡಲಾಗುತ್ತಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ಮಾತನಾಡಿ, ನರೇಗಾ ಯೋಜನೆಯು ಗ್ರಾಮೀಣ ಭಾಗದ ಕುಟುಂಬಗಳಿಗೆ ವರದಾನವಾಗಿದೆ. ಪ್ರತಿಯೊಂದು ಕುಟುಂಬವು 100 ದಿನಗಳ ಕೂಲಿ ಕೆಲಸ ನಿರ್ವಹಿಸಿ ಸಬಲರಾಗಬೇಕೆಂದು ಕರೆ ನೀಡಿದರು.ತಾಪಂ ಇಒ ದುಂಡಪ್ಪ ತುರಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೇಕ್ ಕತ್ತರಿಸಿ ಸಂಭ್ರಮಿಸಿದ ಕೂಲಿಕಾರರು:ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ 5 ಕೆಜಿ ಕೇಕ್ ಕೂಲಿಕಾರರಿಂದ ಕತ್ತರಿಸಿದ ಮೇಲೆ ಹಿರಿಯ ನಾಗರಿಕ ನಿಂಗಪ್ಪ ಕಾಮನೂರು ಇವರಿಗೆ ಸ್ವತಃ ಸಿಇಒ ಕೇಕ್ ತಿನಿಸಿದ್ದರಿಂದ ಕೂಲಿಕಾರರರು ಖುಷಿಪಟ್ಟರು.
ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ವೇದಿಕೆ ಹಂಚಿಕೊಂಡ ಸಿಇಒ:ಕಾರ್ಯಕ್ರಮದ ವೇದಿಕೆಯಲ್ಲಿ ಕೂಲಿಕಾರ ಮಹಿಳೆ ಹಾಗೂಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಾಮಾನ್ಯರಂತೆ ಜಿಪಂ ಸಿಇಒ ವೇದಿಕೆ ಹಂಚಿಕೊಂಡಡರು. ಇದು ಎಲ್ಲರ ಗಮನ ಸೆಳೆಯಿತು.
ಆರೋಗ್ಯ ತಪಾಸಣೆ:ಇರಕಲ್ಲಗಡಾ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಕೂಲಿಕಾರರಿಗೆ ಬಿಪಿ, ಶುಗರ್ ಪರೀಕ್ಷಿಸಲಾಯಿತು. ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳಿಗೆ ಇದೇ ಸಂದರ್ಭ ಮಾತ್ರೆ ವಿತರಿಸಲಾಯಿತು.
ಪ್ರಶಂಸನಾ ಪತ್ರ ವಿತರಣೆ:100 ದಿನಗಳ ಕೂಲಿ ಕೆಲಸ ನಿರ್ವಹಿಸಿದ 9 ಕುಟುಂಬಗಳಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಶಾಲು, ಹೂವಿನಹಾರ ಹಾಕುವುದರ ಮೂಲಕ ಕಾಯಕ ಸಮ್ಮಾನ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಯಂಕಪ್ಪ, ಗ್ರಾಪಂ ಅಧ್ಯಕ್ಷೆ ಶಿವಮ್ಮ ನಾಯ್ಕ, ಉಪಾಧ್ಯಕ್ಷೆ ಬಂಗಾರೆಮ್ಮ ವಾಲ್ಮೀಕಿ, ಸದಸ್ಯರಾದ ಗೌರೀಶ ಸಂಗಟಿ, ನೀಲಪ್ಪ ತಾವರಗೇರಿ, ರಾಮಣ್ಣ ಗೋಸಲದೊಡ್ಡಿ, ವೀರಭದ್ರಯ್ಯ ಕಲ್ಮಠ, ದ್ಯಾಮಣ್ಣ ದೇಸಾಯಿ, ಶಿವಗಂಗಮ್ಮ ಈರಪ್ಪ ಮನ್ನಾಪುರ, ವೈದ್ಯಾಧಿಕಾರಿ ಲಕ್ಷ್ಮೀ ಕೆ., ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ರೇಣುಕಾ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ರವಿಶಂಕರ ಪೂಜಾರಿ, ಮೌನೇಶ್, ಶರಣಪ್ಪ, ಗ್ರಾಮ ಕಾಯಕ ಮಿತ್ರ ಶ್ರೀದೇವಿ, ಲಿಂಗತ್ವ ಅಲ್ಪಸಂಖ್ಯಾತರಾದ ಹುಲಿಗೆಮ್ಮ, ಕಮಲಾಕ್ಷಿ, ಆಶಾ ಕಾರ್ಯಕರ್ತೆಯರು ಕಾಯಕ ಬಂಧುಗಳು ಹಾಗೂ ಕೂಲಿಕಾರರು ಭಾಗವಹಿಸಿದ್ದರು.