ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೇಂದ್ರದ ನರೇಗಾ ಯೋಜನೆಯು ಕೇವಲ ಕಾಂಗ್ರೆಸ್ ಪುಡಾರಿಗಳಿಗೆ ಸೀಮಿತವಾಗಿತ್ತು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನೈಜ ಕಾರ್ಮಿಕರಿಗೆ ದೊರಕಬೇಕಾದ ಹಣ ಲೂಟಿ ಹೊಡೆಯುವ ಮೂಲಕ ಕಾಂಗ್ರೆಸ್ಸಿಗರು ನೀಚ ಕೆಲಸಕ್ಕಿಳಿದಿದ್ದನ್ನು ಸರಿಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿಯವರು ವಿಬಿ ಜಿ ರಾಮ್ ಜಿ ನಾಮಕರಣದೊಂದಿಗೆ ವರ್ಷಕ್ಕೆ ೧೦೦ ದಿನ ಕೂಲಿ ಬದಲಿಗೆ ೧೨೦ ದಿನಕ್ಕೆ ವಿಸ್ತರಿಸಿದ್ದಲ್ಲದೆ ವೇತನದಲ್ಲಿಯೂ ದಿನಕ್ಕೆ ₹೩೭೫ ಕ್ಕೆ ಹೆಚ್ಚಿಸುವ ಮೂಲಕ ಗ್ರಾಮೀಣ ಭಾಗದ ಆರ್ಥಿಕತೆ ಅಭಿವೃದ್ಧಿಗೆ ಬುನಾದಿ ಹಾಕಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಗುರುವಾರ ಸಂಜೆ ನಡೆದ ವಿಬಿ ಜಿ ರಾಮ್ ಜಿ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶೇ.೬೦ ಕಮೀಷನ್ ಹೊಡೆಯುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದೆ. ಆದರೆ ರಾಜ್ಯ ಸರ್ಕಾರದ ಜವಾಬ್ದಾರಿಯಿರಲೆಂದು ಕೇಂದ್ರ ಶೇ.೬೦, ರಾಜ್ಯ ಶೇ.೪೦ ಅನುಪಾತದಲ್ಲಿ ಕಾಯ್ದೆ ಜಾರಿಗೆ ತಂದಿದೆ. ರಾಜ್ಯಕ್ಕೆ ಈ ಯೋಜನೆ ಬಂಗಾರದ ಮೊಟ್ಟೆಯಾಗಿತ್ತು. ಈ ಯೋಜನೆ ರಾಜ್ಯ ಸರ್ಕಾರ ಸಹಿಸಿಕೊಳ್ಳುತ್ತಿಲ್ಲವೆಂದು ವಿಜಯೇಂದ್ರ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಗ್ರಾಮ ಸಭೆಯ ನಿರ್ಧಾರದಂತೆ ಕೆಲಸಗಳಿಗೆ ಅವಕಾಶ ಒದಗಿಸುವಲ್ಲಿ ಕೇಂದ್ರ ಯಾವುದೇ ಹಸ್ತಕ್ಷೇಪವಿಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ. ಸಾಂವಿಧಾನಿಕವಾಗಿ ತಿದ್ದುಪಡಿ ಮಾಡಿ ಗ್ರಾಮಗಳ ಅಭಿವೃದ್ಧಿ ಜೊತೆಗೆ ಪಾರದರ್ಶಕ ಯೋಜನೆ ಜಾರಿಗೊಳಿಸುವ ಉದ್ದೇಶ ಕೇಂದ್ರದ್ದಾಗಿದೆಯೆಂದರು.ಶಾಸಕ ಸಿದ್ದು ಸವದಿ ಮಾತನಾಡಿ, ದೇಶದಲ್ಲಿ ೬೦೦ ನಕಲಿ ಗಾಂಧಿ ಸಂಸ್ಥೆಗಳನ್ನು ಹುಟ್ಟುಹಾಕಿರುವ ಕಾಂಗ್ರೆಸ್, ಮನರೇಗಾ ಯೋಜನೆಯ ಹೆಸರನ್ನು ೮ ಬಾರಿ ಬದಲಿಸಿದೆ. ಆವಾಗ ಚಕಾರೆತ್ತದೆ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದಲಾಗಿರುವುದಕ್ಕೆ ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯೆಂದರು.
ಭಯೋತ್ಪಾದಕರ ಜೊತೆಗೆ ಕೈಜೋಡಿಸುತ್ತಿರುವ ಕಾಂಗ್ರೆಸ್ ಇದೀಗ ಬ್ಯಾಲೆಟ್ ಪೇಪರ್ ಪದ್ದತಿಯನ್ನು ಚುನಾವಣೆಯಲ್ಲಿ ಜಾರಿಗೊಳಿಸಿ ಮತ್ತೆ ಮತಗಟ್ಟೆಗಳನ್ನು ಆಕ್ರಮಿಸುವತ್ತ ಕುತಂತ್ರ ನಡೆಸಿ ರಾಜ್ಯದಲ್ಲಿ ರೌಡಿಗಳ ಅಟ್ಟಹಾಸಕ್ಕೆ ಕೆಂಪು ಹಾಸಿಗೆ ಹಾಕಿ ಅವಕಾಶ ನೀಡುತ್ತಿದೆ. ವಿದೇಶಿ ಅದರಲ್ಲೂ ಬಾಂಗ್ಲಾದಿಂದ ಆಕ್ರಮಿಸಿರುವ ಪ್ರಜೆಗಳು ಒದ್ದೋಡಿಸುವ ಬದಲು ಅವರ ಅಕ್ರಮ ಮತಗಳಿಂದ ಗೆಲುವಿಗೆ ಹಾತೊರೆಯುತ್ತಿದೆ. ಕಾಂಗ್ರೆಸ್ಸಿಗರಿಗೆ ಭಾರತೀಯ ಪ್ರಜೆಗಳ ಮತ ಬೇಕಿಲ್ಲ. ಬದಲಾಗಿ ಇಂತಹ ಉಗ್ರ ಪೋಷಣೆಯೊಂದಿಗೆ ದೇಶ ಹಾಳು ಮಾಡುವ ಸಂಸ್ಕೃತಿಯಾಗಿದೆಯೆಂದು ಸವದಿ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್‌ಗೆ ಅವಕಾಶ ನೀಡಿದ್ದು ಆರ್‌ಎಸ್‌ಎಸ್ : ದೇಶದ ಸಂವಿಧಾನ ರಚನಾ ಸಮಿತಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರರನ್ನು ನೇಮಕ ಮಾಡುವಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಅಂದಿನ ಆರ್‌ಎಸ್‌ಎಸ್ ಮಂಡಲವೇ ಸಮಿತಿಯಲ್ಲಿ ಅವರಿಗೆ ಅವಕಾಶ ನೀಡಲು ಶ್ರಮಿಸಿತ್ತು. ಅಲ್ಲದೆ ಎರಡು ಬಾರಿ ಅಂಬೇಡ್ಕರ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಸೋಲಿಸುವತ್ತ ನೀಚ ರಾಜಕಾರಣಕ್ಕೆ ಭಾಷ್ಯ ಬರೆದು, ಇತಿಹಾಸ ಮರೆತಿರುವ ಕಾಂಗ್ರೆಸ್ ಭವಿಷ್ಯ ರೂಪಿಸಿಕೊಳ್ಳುವದಾದರೂ ಹೇಗೆ? ಎಂದು ಸವದಿ ಲೇವಡಿ ಮಾಡಿದರು.
ವೇದಿಕೆ ಮೇಲೆ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸುರೇಶ ಅಕ್ಕಿವಾಟ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಆನಂದ ಕಂಪು, ಲಕ್ಕಪ್ಪ ಪಾಟೀಲ, ವಿದ್ಯಾಧರ ಸವದಿ, ಸಂಗಮೇಶ ಬಾಬಾಗೌಡ ಪಾಟೀಲ, ಪವಿತ್ರಾ ತುಕ್ಕಣ್ಣವರ ಸೇರಿದಂತೆ ಅನೇಕರಿದ್ದರು.