ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಗದಗ ಜಿಲ್ಲೆ ಬಯಲುಸೀಮೆ ಎಂದು ಗುರುತಿಸಲ್ಪಡುತ್ತಿದ್ದು, ಇಲ್ಲಿ ಕೆಲವರ್ಷ ಉತ್ತಮ ಮಳೆಯಾದರೆ ಮತ್ತೆ ಹಲವು ವರ್ಷ ಮಳೆ ಇಲ್ಲದೇ ಜನರು ತತ್ತರಿಸುವುದು ಸಾಮಾನ್ಯ. ಆದರೆ ಜಿಪಂ ವಿಭಾಗದಿಂದ ಮನರೇಗಾದಲ್ಲಿ ವಿಶೇಷ ಆಸಕ್ತಿ ವಹಿಸಿ ಬಯಲುಸೀಮೆಯ ರಸ್ತೆಗಳಿಗೆ ಹಸಿರು ಮೆರುಗು ನೀಡಲಾಗಿದ್ದು, ದಾರಿಹೋಕರನ್ನು ಆಕರ್ಷಿಸುತ್ತಿವೆ.ಜಿಲ್ಲೆಯ 5 ವಲಯಗಳ ವ್ಯಾಪ್ತಿಯ ಗ್ರಾಮೀಣ ರಸ್ತೆಯ ಪಕ್ಕದ ಬರಡು ಪ್ರದೇಶದಲ್ಲಿ ನರೇಗಾ ಒಗ್ಗೂಡಿಸುವಿಕೆಯಡಿ ಸಾಮಾಜಿಕ ಅರಣ್ಯ ಇಲಾಖೆಯು ನಾನಾ ಬಗೆಯ ಗಿಡಗಳನ್ನು ನೆಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಜಮೀನುಗಳ ವ್ಯಾಪ್ತಿಯಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮನರೇಗಾ ಯೋಜನೆಯನ್ನು ಸಮಪರ್ಕವಾಗಿ ಬಳಸಿಕೊಂಡು 252 ಕಿಮೀಗಳಷ್ಟು ಗ್ರಾಮೀಣ ರಸ್ತೆಯ ಅಕ್ಕಪಕ್ಕದಲ್ಲಿ ಗಿಡಮರಗಳನ್ನು ಬೆಳೆಸಿ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದೆ.
ವಿವಿಧ ಬಗೆಯ ಸಸಿಗಳ ಬಳಕೆ: ಗ್ರಾಮಗಳ ಗೈರಾಣ ಜಮೀನಿನ ಹತ್ತಿರ, ರಸ್ತೆಯ ಅಕ್ಕಪಕ್ಕದಲ್ಲಿ ಮರಗಳ ನೆಡುತೋಪುಗಳನ್ನು ನಿರ್ಮಾಣ ಮಾಡಲಾಗಿದ್ದು, ಬೇವು, ಅರಳಿ, ಹುಣಸೇ, ಗುಲ್‌ಮೊಹರ್, ಆಲ, ಹೊಂಗೆ, ಬಸರಿ, ರೈನ್ ಟ್ರಿ ಹಾಗೂ ಬಸವನಪಾದ ಗಿಡಗಳನ್ನು ನೆಡಲಾಗಿದೆ. ಪ್ರತಿ ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳುವ ಮಧ್ಯೆ ಸಾಮಾನ್ಯವಾಗಿ ಕಾಣಸಿಗುವ ಜಾಲಿ ಮುಳ್ಳಿನ ಕಂಟಿಗಳನ್ನು ಬಿಟ್ಟರೆ ಬೇರಾವ ಮರವೂ ನೋಡಲು ಕಾಣದಂಥ ವೇಳೆಯಲ್ಲಿಯೇ ಮನರೇಗಾ ಯೋಜನೆಯೊಂದಿಗೆ ಸಾಮಾಜಿಕ ಅರಣ್ಯ ಇಲಾಖೆಯು 2021- 22ರಿಂದ ಪ್ರಸಕ್ತ ಸಾಲಿನ ವರೆಗೂ ಹಂತ- ಹಂತವಾಗಿ 252 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ರಸ್ತೆಬದಿ ನೆಡುತೊಪು ನಿರ್ಮಾಣ ಮಾಡಿದೆ.ನೈಸರ್ಗಿಕ ಹೂವಿನ ಪೆಂಡಾಲ್: ನರೇಗಾ ಅಡಿಯಲ್ಲಿ 2015- 16ನೇ ಸಾಲಿನಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತು. ಮೊದಲ ಹಂತದಲ್ಲಿ 500 ರೈನ್ ಟ್ರೀ ಸಸಿಗಳನ್ನು ನೆಟ್ಟು ಬೆಳೆಸಲಾಗಿತ್ತು. ನಂತರದಲ್ಲಿ ಅವು ದಾರಿಹೋಕರನ್ನು ತಮ್ಮತ್ತಾ ಆಕರ್ಷಿಸಿಸುವಂತೆ ಮಾಡಿದ್ದವು. ಇದನ್ನೇ ಮಾದರಿಯಾಗಿಸಿ 2021- 22ನೇ ಸಾಲಿನಲ್ಲಿ 50 ಸಾವಿರ ರೈನ್ ಟ್ರೀ ಹಾಗೂ ಬಸವನಪಾದ ಸಸಿಗಳನ್ನು ರಸ್ತೆಬದಿ ನೆಟ್ಟಿದ್ದರಿಂದ ಜಿಲ್ಲೆಯಲ್ಲಿ ಹಲವು ರಸ್ತೆಗಳ ಬದಿ ಬೇಸಿಗೆಯಲ್ಲಿ ನೈಸರ್ಗಿಕ ಹೂವಿನ ಪೆಂಡಾಲ್‌ಗಳಂತೆ ಭಾಸವಾಗಿ ಜನರನ್ನು ಆಕರ್ಷಿಸುತ್ತಿವೆ.
ಆಕರ್ಷಕ: ಗದಗ- ಸವಡಿ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡಲಾಗಿದ್ದು, ಹಸಿರಿನಿಂದ ಕೂಡಿದ್ದು, ಅತ್ಯಂತ ಆಕರ್ಷಕವಾಗಿವೆ. ಮಳೆಗಾಲದಲ್ಲಿ ಅತ್ಯಂತ ಹರಿಸಿನಿಂದ ಕಂಗೊಳಿಸಿ ಜನರನ್ನು ಸ್ವಾಗತಿಸಿದರೆ, ಚಳಿಗಾಲ ಮತ್ತು ಬೇಸಿಗೆ ಸಂದರ್ಭದಲ್ಲಿ ಹೂವುಗಳನ್ನು ವ್ಯಾಪಕವಾಗಿ ಬಿಡುವುದರಿಂದ ಮತ್ತಷ್ಟು ಸುಂದರವಾಗಿ ಕಾಣುತ್ತವೆ ಎಂದು ಸವಡಿ ಗ್ರಾಮದ ರೈತರಾದ ಮುತ್ತಪ್ಪ ಇಟಗಿ, ರಾಮನಗೌಡ ಅರಹುಣಸಿ ತಿಳಿಸಿದರು.