ಸಾರಾಂಶ
ಹರಪನಹಳ್ಳಿ: ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ನರೇಗಾ ಯೋಜನೆ ಸಾಕಷ್ಟು ಕೈ ಹಿಡಿಯುವುದರ ಮೂಲಕ ನಾನಾ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಆದರೆ, ಅವುಗಳ ಸದ್ವಿನಿಯೋಗ ಸಾರ್ವಜನಿಕರ ಕೈಯಲ್ಲಿರುತ್ತದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ತಾಲೂಕಿನ ಅನಂತಹಳ್ಳಿ ಸಮೀಪದಲ್ಲಿರುವ ಆದರ್ಶ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಅಡುಗೆ ಕೋಣೆ ಮತ್ತು ಭೋಜನಾಲಯವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕ್ಷೇತ್ರದ ಎಲ್ಲ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ಕಂಪೌಂಡ್, ಅಡುಗೆ ಕೋಣೆ, ಶೌಚಾಲಯ, ಮೈದಾನ ಅಭಿವೃದ್ಧಿಗೆ ಹೀಗೆ ನವರತ್ನ ಮಾದರಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಈಗಾಗಲೇ ಶೇ.75ಕ್ಕೂ ಅಧಿಕ ಶಾಲೆಗಳಲ್ಲಿ ಕಾಮಗಾರಿಗಳು ಮುಕ್ತಾಯಗೊಂಡಿವೆ. ಬಾಕಿ ಶೇ.25 ಶಾಲೆಗಳಲ್ಲಿ ಕಾಮಗಾರಿಗಳ ಪ್ರಗತಿಯಲ್ಲಿದ್ದರೆ, ಇನ್ನು ಕೆಲವೆಡೆ ತಾಂತ್ರಿಕ ತೊಂದರೆಗಳು ಎದುರಾಗಿದೆ. ಅದನ್ನು ಶೀಘ್ರದಲ್ಲಿ ಬಗೆಹರಿಸಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ನೀರು ಮತ್ತು ಮಣ್ಣು ಸಂರಕ್ಷಣೆ ಕಾಮಗಾರಿಗಳು, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಗ್ರಾಮೀಣ ಭಾಗದ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳಿಗಾಗಿ ವಿವಿಧ ಕಾಮಗಾರಿಗಳು, ತೋಟಗಾರಿಕೆ ಕಾಮಗಾರಿಗಳು, ಜೀವನೋಪಾಯ ವ್ಯೆಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಹುದಾಗಿದೆ. ಇವುಗಳನ್ನು ಹಂತ ಹಂತವಾಗಿ ಪ್ರಾರಂಭಿಸಿ ರಾಜ್ಯದಲ್ಲೇ ತಾಲೂಕನ್ನು ಮಾದರಿಯನ್ನಾಗಿಸಲು ಇಲ್ಲಿನ ಅಧಿಕಾರಿಗಳು ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಇವರ ಜತೆ ನಿರಂತರವಾಗಿ ನಾವೂ ಕೆಲಸ ಮಾಡುತ್ತಿದ್ದೇವೆ. ನರೇಗಾ ಮಾತ್ರವಲ್ಲದೇ ನಮ್ಮ ವ್ಯಾಪ್ತಿಗೆ ಬರುವ ಎಲ್ಲ ಯೋಜನೆಗಳಿಂದ ಗ್ರಾಮೀಣಾಭಿವೃದ್ಧಿಗೊಳಿಸಲು ನಿರಂತರವಾಗಿ ಕೆಲಸ ಮಾಡತ್ತಿದ್ದೇವೆ ಎಂದು ತಿಳಿಸಿದರು.ತಾಪಂ ಇಒ ಚಂದ್ರಶೇಖರ್ ವೈ.ಎಚ್ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಶಾಲಾ ಕಾಮಗಾರಿಗಳನ್ನು ಅಭಿಯಾನ ರೂಪದಲ್ಲಿ ಕೈಗೆತ್ತಿಕೊಂಡು ನಿರ್ಮಿಸಲಾಗಿದೆ. ಈ ಬಾರಿ ಸ್ಮಶಾನಗಳ ಅಭಿವೃದ್ಧಿಗೆ ಜಿಪಂನ ಮೇಲಧಿಕಾರಿಗಳ ಸೂಚನೆ ಹಾಗೂ ಸ್ಥಳೀಯ ಶಾಸಕರ ಸಲಹೆಯಂತೆ ತಾಪಂ ಹಾಗೂ ಗ್ರಾಪಂಗಳು ಪಣತೊಡಲಾಗಿದೆ. ಅದರಂತೆ ಆದಷ್ಟು ಶೀಘ್ರ ಸ್ಮಶಾನಗಳ ಅಭಿವೃದ್ಧಿ ಅಭಿಯಾನ ರೂಪದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಬಳಿಕ ಹಲುವಾಗಲು ಗ್ರಾಮದ ಸ.ಪ್ರೌ.ಶಾಲೆಯಲ್ಲಿ ಅಡುಗೆ ಕೋಣೆ ಉದ್ಘಾಟಿಸಿದರು. ಬಳಿಕ ವಿವಿಧ ಗ್ರಾಪಂಗಳಲ್ಲಿ 2022-23ನೇ ಸಾಲಿನ ಬಸವ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಹೆಚ್ಚುವರಿ ಮನೆಗಳ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರಗಳನ್ನು ಆಯ್ಕೆಗೊಂಡ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣವರ್, ಪಿಡಿಒಗಳಾದ ಷಣ್ಮುಖಪ್ಪ, ಶಂಭುಲಿಂಗಯ್ಯ, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ವಿ.ಅಂಜಿನಪ್ಪ,ಪುರಸಭಾ ಸದಸ್ಯ ಲಾಟಿ ದಾದಪೀರ್, ತಾಂತ್ರಿಕ ಸಹಾಯಕ ಇಂಜಿನಿಯರ್‌ರಾದ ಎಚ್.ಎ.ಪ್ರಕಾಶ್, ಲೋಕೇಶ್ ನಾಯ್ಕ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಇತರರಿದ್ದರು.