ಸಾರಾಂಶ
ದೀಪ ಸಂಜೀವಿನಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎನ್ಆರ್‌ಎಲ್ಎಂ ಯೋಜನೆ ಮಹಿಳೆಯರು ಸ್ವಾವಲಂಬನೆಯಾಗಿ ಬದಕಲು ದಾರಿ ದೀಪವಾಗಿದೆ. ತಾವೇ ಉತ್ಪಾದಿಸಿದ ವಸ್ತುಗಳನ್ನು ಮಾರು ಮಳಿಗೆಯನ್ನು ಸಹ ಜಿಲ್ಲಾ ಪಂಚಾಯಿತಿಯವರು ನಿರ್ಮಿಸಿಕೊಟ್ಟಿದ್ದಾರೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಜಿಪಂ ಹಾಗೂ ತಾಪಂ ಸಹಯೋಗದಲ್ಲಿ ನವನಗರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಉದ್ಘಾಟಿಸಿದರು. ಜಿಪಂ ಸಿಇಒ ಮಾತನಾಡಿ, ಈ ಯೋಜನೆಯಡಿ ಮಹಿಳೆಯರು ಸ್ವ-ಉದ್ಯೋಗ ಚಟುವಟಿಕೆ ಕೈಗೊಳ್ಳಲು ಜಿಪಿಎಲ್ಎಫ್ ಮೂಲಕ ಸಮುದಾಯ ಬಂಡವಾಳ ನಿಧಿ, ಸುತ್ತುನಿಧಿ, ಬೀಜಧನ ಹಾಗೂ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆಗಳು ಮತ್ತು ಎತ್ತುಗಳ ಮೂರ್ತಿಗಳು, ಅಗರಬತ್ತಿ, ಕರ್ಪೂರ, ಊಟದ ತಟ್ಟೆ, ರೊಟ್ಟಿ, ಮುತ್ತಿನ ದಂಡೆ, ಮುತ್ತಿನ ತೆನೆ, ಪಾಪಡ್, ವಿವಿಧ ವಿನ್ಯಾಸದ ಕಾಟನ್ ಹಾಗೂ ಜ್ಯೂಟ್ ಬ್ಯಾಗ ಮತ್ತು ಪರ್ಸ್‌ಗಳು, ಇಳಕಲ್ ಹಾಗೂ ರಬಕವಿ ಬನಹಟ್ಟಿ ಸೀರೆಗಳ ಮಾರಾಟಕ್ಕೆ ಅವಕಾಶಕಲ್ಪಿಸಲಾಗಿದ್ದು, ಅವುಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕರು ಡಾ.ಪುನೀತ್ ಬಿ.ಆರ್, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಹಾಗೂ ಬಾಗಲಕೋಟೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ್ ಸಂಪಗಾಂವಿ ಮತ್ತು ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಜಿಲ್ಲಾ, ತಾಲೂಕು ಸಿಬ್ಬಂದಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.