ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಗುಡ್ಡದ ಶಂಕರನಹಳ್ಳಿ ಗ್ರಾಮದಲ್ಲಿ ನಡೆಸುತ್ತಿರುವ ವಾರ್ಷಿಕ ಶಿಬಿರ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಶಿಬಿರದ ವಿವಿಧ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸಹಕಾರ ನೀಡಿ ಸಾಥ್ ಗೆ ನಿಂತಿದ್ದಾರೆ.ಕಾಲೇಜಿನ ಪ್ರಾಂಶುಪಾಲ ಹಾಗೂ ಶಿಬಿರ ನಿರ್ದೇಶಕ ಡಿ.ಎಂ. ಪರಮಶಿವಪ್ಪ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕ ಮತ್ತು ಶಿಬಿರ ಅಧಿಕಾರಿ ಮೋಹನ್ ಕುಮಾರ್ ಶಿಬಿರವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಶಿಬಿರ ಪ್ರಾರಂಭೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದ ದೇವಾಲಯ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನಾಂದಿ ಇಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹಲಿಂಗಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಚಿಕ್ಕಮಗಳೂರಿನ ಗೌತಮ್ ಗ್ರೂಪ್ ಕಂಪನಿಯ ಸಿಇಒ ಗೌತಮ್ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನ ವೈಸಿಸಿ ವ್ಯವಸ್ಥಾಪಕ ಎಚ್.ಎಸ್. ಸಿದ್ದೇಶ್ ಉದ್ಯೋಗ ಅವಕಾಶಗಳ ಮಾರ್ಗದರ್ಶನ ನೀಡಿದರು. ಗ್ರಾಮ ಮುಖಂಡ ಎಸ್ಎಂಎಸ್ ಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಶಿಕಾಂತ್ ಬೋದಿಹಾಳ ಗ್ರಾಮದಲ್ಲಿನ ಜಾನುವಾರುಗಳಿಗೆ ಆರೋಗ್ಯ ತಪಾಸಣೆ, ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಹಾಗೂ ಪಶುಧಾರಕರಿಗೆ ಬಹುಮಾನ ವಿತರಣೆ ನೆರವೇರಿಸಿದರು. ಅಗ್ಗುಂದ ಪಶು ಆಸ್ಪತ್ರೆಯ ವೈದ್ಯ ಡಾ. ಹನುಮಂತಪ್ಪ ಸಹಕಾರ ನೀಡಿದರು.
ಸಭಾಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಜ್ಞಾನೇಶ್, ತಮ್ಮ ಗ್ರಾಮವನ್ನು ಶಿಬಿರಕ್ಕಾಗಿ ಆಯ್ಕೆ ಮಾಡಿರುವುದಕ್ಕೆ ಕಾಲೇಜು ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.ಉಪನ್ಯಾಸಕ ಡಾ. ಕೆ.ಎಸ್. ಹರಶಿವಮೂರ್ತಿ ಪುರಾತನ ಶಿಲಾಶಾಸನಗಳ ಸಂರಕ್ಷಣೆಯ ಅಗತ್ಯವನ್ನು ವಿವರಿಸಿದರು. ವಕೀಲ ವಿವೇಕ್ ನಾಗರಿಕರಿಗೆ ಕಾನೂನು ಅರಿವು ನೀಡಿದರು.
‘ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದಲ್ಲಿ ತಿಪಟೂರು ಅರಣ್ಯ ರಕ್ಷಕ ಟಿ.ಎಚ್. ರಮೇಶ್ ಹಿರೇಕಲ್ ಗುಡ್ಡ ಮತ್ತು ಗರುಡನಗಿರಿಯ ಔಷಧೀಯ ಸಸ್ಯ ಸಂಪತ್ತಿನ ಬಗ್ಗೆ ತಿಳಿಸಿ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಹೈಲೈಟ್ ಮಾಡಿದರು. ತಾಲೂಕಿನ ಸಹಾಯಕ ವಲಯ ಅರಣ್ಯ ಅಧಿಕಾರಿ ದಿಲೀಪ್, ಅರಣ್ಯ ಸಂರಕ್ಷಣೆ ಸಾರ್ವಜನಿಕ ಸರ್ಕಾರಗಳ ಸಂಯುಕ್ತ ಜವಾಬ್ದಾರಿ ಎಂದು ಹೇಳಿದರು.ತಾಲೂಕು ಜನಪದ ಪರಿಷತ್ ಅಧ್ಯಕ್ಷ ಪರಮೇಶ್ ಆಧುನಿಕ ಜೀವನ ಶೈಲಿ ಹಾಗೂ ಪೂರ್ವಿಕರ ಜೀವನ ಶೈಲಿಯ ವ್ಯತ್ಯಾಸ ಮತ್ತು ಅದರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ವಿವರಿಸಿದರು.
ಶಿಬಿರದಲ್ಲಿ ಭಾಗವಹಿಸಿದ ಉಪನ್ಯಾಸಕರಾದ ತಿಮ್ಮೇಗೌಡ, ಎಂ.ಬಿ. ನಾಗರಾಜು, ಎನ್.ಓಂಕಾರಮ್ಮ, ಜಿ. ವರಲಕ್ಷ್ಮೀ ಶಿಬಿರಾರ್ಥಿಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಗ್ರಾಮದ ದೇವಾಲಯ ಸ್ವಚ್ಛತೆ, ಸಸಿ ನೆಡುವುದು, ಕಲ್ಯಾಣಿ ಸ್ವಚ್ಛಗೊಳಿಸುವುದು ಮೊದಲಾದ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಸೇವಾಭಾವ ಕಂಡ ಗ್ರಾಮಸ್ಥರು ಮಕ್ಕಳೊಂದಿಗೆ ಕೈಜೋಡಿಸಿ ಶಿಬಿರದ ಯಶಸ್ಸಿಗೆ ಕಾರಣರಾಗಿದ್ದಾರೆ.