ಸಮಾಜದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಸಹಕಾರ ಮನೋಭಾವ ಬೆಳೆಸಲು ಮತ್ತು ರಾಷ್ಟ್ರಪ್ರೇಮ ಗಟ್ಟಿಗೊಳಿಸಲು ಎನ್.ಎಸ್.ಎಸ್. ಶಿಬಿರಗಳು ಪ್ರೇರಣೆ ನೀಡುತ್ತವೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ಹಳಿಯಾಳ: ಸಮಾಜದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಸಹಕಾರ ಮನೋಭಾವ ಬೆಳೆಸಲು ಮತ್ತು ರಾಷ್ಟ್ರಪ್ರೇಮ ಗಟ್ಟಿಗೊಳಿಸಲು ಎನ್.ಎಸ್.ಎಸ್. ಶಿಬಿರಗಳು ಪ್ರೇರಣೆ ನೀಡುತ್ತವೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.
ತಾಲೂಕಿನ ಗರಡೊಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಏಳು ದಿನಗಳ ರಾಷ್ಟ್ರೀಯ ಎನ್.ಎಸ್.ಎಸ್. ನಾಯಕತ್ವ ಶಿಬಿರ ಹಾಗೂ ಸಿದ್ಧಿ ಬುಡಕಟ್ಟು ಜನರ ಜೀವನ ಮತ್ತು ಸಂಸ್ಕೃತೀಯ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಆತ್ಮವಿಶ್ವಾಸ, ಶಿಸ್ತು, ತಾಳ್ಮೆ ಮತ್ತು ಜವಾಬ್ದಾರಿ ಬೆಳೆಸುವಲ್ಲಿ ಈ ಶಿಬಿರ ವೇದಿಕೆಯಾಗಿದೆ. ಈ ಶಿಬಿರದಲ್ಲಿ ಕಲಿತ ನಾಯಕತ್ವ ಮತ್ತು ಸಹಕಾರದ ಪಾಠವನ್ನು ವಿದ್ಯಾರ್ಥಿಗಳು ತಮ್ಮ ಸಮಾಜದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಪಾಠಶಾಲೆಯೊಳಗಿನ ಕಲಿಕೆಯಿಂದ ಜೀವನದ ನಾಯಕತ್ವದ ಕಡೆಗೆ ಕರೆದೊಯ್ಯುವುದಾಗಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೇ ಎನ್.ಎಸ್.ಎಸ್. ನಾಯಕತ್ವ ತರಬೇತಿ ಶಿಬಿರ ಸೇವೆ ಮಾಡುವ ಮೂಲಕ ನಾಯಕನಾಗುವ ತರಬೇತಿ ನೀಡುವ ಕಲಿಕೆಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ.ವಿ.ವಿ. ಧಾರವಾಡದ ಕುಲಪತಿ ಪ್ರೊ. ಎ.ಎಂ. ಖಾನ್ ಮಾತನಾಡಿ, ನಾಯಕತ್ವ ಶಿಬಿರದ ದಿನಗಳ ಸದುಪಯೋಗ ಪಡೆದುಕೊಳ್ಳಿ. ಹಳ್ಳಿಯ ಜೀವನದ ಆನಂದ ಅನುಭವಿಸಿ. ಅವರ ಜೀವನ ಶೈಲಿ ಅರ್ಥಮಾಡಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ದಾಂಡೇಲಿ ಕಾಗದ ಕಾರ್ಖಾನೆಯ ಸಂಪರ್ಕ ಅಧಿಕಾರಿ ರಾಘವೇಂದ್ರ ಜೆ.ಆರ್. ಮಾತನಾಡಿ, ಸಿದ್ಧಿ ಜನಾಂಗದ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ದಾಂಡೇಲಿ ಶಿಕ್ಷಣ ಸಂಸ್ಥೆ ಯಾವತ್ತೂ ಸಮಾಜದಲ್ಲಾಗುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಾಯ ನೀಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಲ್. ಗುಂಡೂರ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮಿ ಸಿದ್ಧಿ, ಬುಡಕಟ್ಟು ಸಿದ್ಧಿ ಸಮುದಾಯದ ಮುಖಂಡರಾದ ಬಸ್ತ್ಯಾಂವ್ ದಿಯೋಗ್ ನಾಯ್ಕ, ಜನಪದ ಕಲಾವಿದೆ ಜುಲಿಯಾನಾ ಫರ್ನಾಂಡೀಸ್, ದಾಂಡೇಲಿಯ ವಕೀಲ ರಾಹುಲ್ ಬಾವಾಜಿ ಉಪಸ್ಥಿತರಿದ್ದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ರಾಷ್ಟ್ರೀಯ ಸೇವಾ ಯೋಜನಾಕೋಶ, ದಾಂಡೇಲಿ ಶಿಕ್ಷಣ ಸಂಸ್ಥೆಯ ಬಂಗೂರನಗರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ದಾಂಡೇಲಿ, ಎನ್.ಎಸ್.ಎಸ್. ಘಟಕ ಮತ್ತು ಮಾನವ ಹಕ್ಕುಗಳ ಸಂಘ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾಲಯ ಮಟ್ಟದ ಎನ್.ಎಸ್.ಎಸ್. ನಾಯಕತ್ವ ತರಬೇತಿ ಮತ್ತು ಸಿದ್ಧಿ ಬುಡಕಟ್ಟು ಜನರ ಜೀವನ ಮತ್ತು ಸಂಸ್ಕೃತಿಯ ಅಧ್ಯಯನ ಶಿಬಿರ ಆಯೋಜಿಸಲಾಗಿದೆ.ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಹಾವಿದ್ಯಾಲಯದಿಂದ ಬೇರೆ ಬೇರೆ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಹಾಗೂ 140ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕ.ವಿ.ವಿ., ಧಾರವಾಡದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ, ಹಾಗೂ ಬಂಗೂರ ನಗರ ದಾಂಡೇಲಿ ಪದವಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಡಾ. ಎಸ್.ಎಸ್. ಹಿರೇಮಠ ಇದ್ದರು.ಹರ್ಷಿತಾ ನಾಯಕ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಗದಗ-ಬೆಟಗೇರಿಯ ವಾಗೀಶ ರೇಶ್ಮಿ, ಮತ್ತು ಡಾ. ಲಕ್ಷ್ಮೀ ಪರಬ ನಿರೂಪಿಸಿದರು. ಶಿಬಿರದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಗರಡೊಳ್ಳಿ ಗ್ರಾಮಸ್ಥರು ಇದ್ದರು.