ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯುವ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವ ವೃದ್ಧಿಸುವಲ್ಲಿ ಎನ್‌ಎಸ್‌ಎಸ್ ಸಹಕಾರಿ ಆಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಫಲಾಪೇಕ್ಷೆ ಬಯಸದೇ ನಿರಂತರ ಸೇವೆ ಮಾಡುತ್ತಿರುವ ಎನ್‌ಎಸ್‌ಎಸ್ ಘಟಕಗಳು ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಸೇವಾ ಮನೋಭಾವ ವೃದ್ಧಿಸುವ ಗೀತಗಾಯನದಿಂದ ಮಕ್ಕಳ ಮನಸ್ಸು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತದೆ. ಮಕ್ಕಳಲ್ಲಿರುವ ದುರ್ಗುಣ ದುಮ್ಮಾನಗಳು ಕಡಿಮೆಯಾಗುತ್ತವೆ. ಜಾತಿ- ಮತಗಳ ಭೇದವಿಲ್ಲದೆ ಗ್ರಾಮಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತ, ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿತ್ತಿರುವ ಎನ್‌ಎಸ್‌ಎಸ್ ಘಟಕಗಳು ಸಮಾಜದ ಆಸ್ತಿಯಾಗಿವೆ ಎಂದರು.ಮುಖ್ಯ ಅತಿಥಿ, ಕಾಲೇಜಿನ ಸಹ ಪಾಧ್ಯಾಪಕ ಡಾ. ಬಿ.ಸಿ. ಬಸಪ್ಪ ಮಾತನಾಡಿ, ರಾಷ್ಟ್ರದ ಆಸ್ತಿ ನಿರ್ಮಾಣ ಹಾಗೂ ರಾಷ್ಟ್ರದ ಪ್ರೇಮ, ಸಹೋದರತ್ವ, ಏಕತೆ ಹಳ್ಳಿಗಳ ಬೆಳವಣಿಗೆಗೆ ಎನ್‌ಎಸ್‌ಎಸ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಡಾ. ದಿಲ್ ಶಾ ರಚನೆ ಮಾಡಿದ ಎನ್‌ಎಸ್‌ಎಸ್ ಗೀತೆ ಸದಾ ಹಚ್ಚಹಸಿರಾಗಿದೆ. ಇಂತಹ ಗೀತೆಗಳನ್ನು ಹಾಡುವುದರಿಂದ ಮಕ್ಕಳಲ್ಲಿ ಚೈತನ್ಯ ಮೂಡುತ್ತದೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ಸೋಲು- ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ಮುಖ್ಯ. ಎಲ್ಲ ಗೀತೆಗಳಿಗಿಂತ ಎನ್‌ಎಸ್‌ಎಸ್ ಗೀತೆ ತುಂಬಾ ವಿಭಿನ್ನವಾಗಿದೆ. ಪ್ರತಿಯೊಂದು ಸಾಲು ಸಾಲಿನಲ್ಲಿ ಸೇವಾ ಮನೋಭಾವನೆ ಬಿತ್ತುವ ಕಾರ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮನತುಂಬಿ ಹಾಡಬೇಕು ಎಂದು ತಿಳಿಸಿದರು.ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಕೆ.ಎಂ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೀತಗಾಯನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಮೂಡಿಸುತ್ತದೆ. ಆದರಿಂದ ಸರಿಯಾಗಿ ಅಭ್ಯಾಸ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಟಿಎನ್‌ಸಿಸಿ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಮಾತನಾಡಿ, ಈಗಾಗಲೇ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳನ್ನು ನಮ್ಮ ಕಾಲೇಜು ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಕಾಲೇಜು ಎಂದು ಹೆಸರುವಾಸಿ ಪಡೆದಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿಯಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಪ್ರೊ. ಜಗದೀಶ್, ಪ್ರೊ. ಮಂಜುನಾಥ್ ಉಪಸ್ಥಿತರಿದ್ದರು.
- - --12ಎಸ್‌ಎಂಜಿಕೆಪಿ07:
ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಗೀತ ಗಾಯನ ಸ್ಪರ್ಧೆಯನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಉದ್ಘಾಟಿಸಿದರು.