ದೇಶಪ್ರೇಮ, ಸ್ವಾಭಿಮಾನಿ ಜೀವನಕ್ಕೆ ಎನ್‌ಎಸ್‌ಎಸ್ ಸಹಕಾರಿ

| Published : May 09 2025, 12:30 AM IST

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಹಾಗೂ ಬದುಕಿನ ಮೌಲ್ಯಗಳನ್ನು ಉತ್ತಮಪಡಿಸಿಕೊಂಡು ದೇಶಪ್ರೇಮ, ಸ್ವಾಭಿಮಾನ, ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಹೆಚ್ಚು ಸಹಕಾರಿಯಾಗಲಿದೆ ಎಂದು ಯುವಜನ ಮತ್ತು ಕ್ರೀಡೆ ಇಲಾಖೆಯ ಆಯುಕ್ತ ಆರ್. ಚೇತನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಹಾಗೂ ಬದುಕಿನ ಮೌಲ್ಯಗಳನ್ನು ಉತ್ತಮಪಡಿಸಿಕೊಂಡು ದೇಶಪ್ರೇಮ, ಸ್ವಾಭಿಮಾನ, ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಹೆಚ್ಚು ಸಹಕಾರಿಯಾಗಲಿದೆ ಎಂದು ಯುವಜನ ಮತ್ತು ಕ್ರೀಡೆ ಇಲಾಖೆಯ ಆಯುಕ್ತ ಆರ್. ಚೇತನ್ ತಿಳಿಸಿದರು.

ತಾಲೂಕಿನ ಚಿಕ್ಕಹೊನ್ನವಳ್ಳಿ ಗ್ರಾಮದಲ್ಲಿ ನಗರದ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಕನಸನ್ನು ನನಸಾಗಿಸುವುದೇ ಎನ್.ಎಸ್.ಎಸ್. ಯೋಜನೆಯ ಮುಖ್ಯ ಉದ್ದೇಶ. ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ, ಸಹಬಾಳ್ವೆ, ಬ್ರಾತೃತ್ವ, ಜಾತ್ಯತೀತತೆ, ಭಾವೈಕ್ಯತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವವನ್ನು ಯುವಪೀಳಿಗೆಗೆ ಅರಿವು ಮೂಡಿಸುವುದೂ ಸಹ ಈ ಯೋಜನೆ ಶಿಬಿರದ ಮುಖ್ಯ ಗುರಿಯಾಗಿದ್ದು ಯುವಶಕ್ತಿ ಪ್ರಯೋಜನ ಪಡೆದುಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು. ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್.ವಿಜಯಕುಮಾರಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಎನ್.ಎಸ್.ಎಸ್. ಶಿಬಿರವನ್ನಿ ಆಯೋಜಿಸಿದ್ದು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ ಬೆಳೆಯಲಿದೆ. ಎನ್.ಎಸ್.ಎಸ್. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಾ, ಸಮಾಜದ ಅಗತ್ಯತೆಗಳನ್ನು ಗುರುತಿಸಿ, ಸಮಾಜಕ್ಕೆ ಅನುಕೂಲವಾಗುವ ಬಗ್ಗೆ ಏನು ಮಾಡಬಹುದು ಎಂಬುದನ್ನು ಆಲೋಚಿಸಿ ಆ ಕೆಲಸವನ್ನು ಶ್ರದ್ದೆಯಿಂದ ಮಾಡುವ ಪ್ರಯುತ್ನ ಸದಾ ಒಳಿತನ್ನು ಉಂಟು ಮಾಡುತ್ತದೆ ಎಂದರು. ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ಡಾ. ರಕ್ಷಿತ್‌ಗೌಡ, ಡಾ. ಪಲ್ಲವಿ, ಆಪ್ತ ಸಮಾಲೋಚಕ ಶ್ರೀನಿವಾಸ್‌ರವರು ಆರೋಗ್ಯ ಕುರಿತು ಮಾತನಾಡಿದರು. ನಂತರ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು ೫೦ ಜನ ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಂಗಪ್ಪ, ಬಾಬು ಪ್ರಸಾದ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಸಿ.ಎಂ.ಎಸ್. ಲೋಕೇಶ್ವರಯ್ಯ ಬಿ. ಶ್ರೀನಿವಾಸ್, ಡಾ. ಜಿ.ಎಂ. ಲಲಾಟಾಕ್ಷಮೂರ್ತಿ, ಪ್ರೊ. ಎಂ.ಸಿ. ಯೋಗನಂದ್ ಮತ್ತಿತರರಿದ್ದರು.