ನಳಿನ್ ಮನೆ ಮುತ್ತಿಗೆಗೆ ಎನ್‌ಎಸ್‌ಯುಐ ಯತ್ನ

| Published : Feb 09 2024, 01:47 AM IST / Updated: Feb 09 2024, 04:35 PM IST

ಸಾರಾಂಶ

ಎನ್‌.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳೂರಲ್ಲಿ ಗುರುವಾರ ಸಂಸದರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು 

ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೋರುತ್ತಿರುವ ತಾರತಮ್ಯ ಧೋರಣೆ ಖಂಡಿಸಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಸಮರ್ಪಕ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಎನ್‌.ಎಸ್.ಯು.ಐ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳೂರಲ್ಲಿ ಗುರುವಾರ ಸಂಸದರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.

ಈ ವೇಳೆ ಮಾತನಾಡಿದ ಸುಹಾನ್ ಆಳ್ವ, ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಶಾಲಾ ಕಾಲೇಜುಗಳಿದ್ದರೂ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ತಾರಮತ್ಯ ಮಾಡಲಾಗುತ್ತಿದೆ. ನಮ್ಮ ತೆರಿಗೆ ಹಣ ನಮಗೆ ನೀಡಲು ನಿರಾಕರಿಸಲಾಗುತ್ತಿದೆ. ಜಿಲ್ಲೆಗೆ ಸಂಸದ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಬ್ಯಾರಿಕೇಡ್ ತಳ್ಳಿ ಮುತ್ತಿಗೆಗೆ ಮುಂದಾದಾಗ ಎನ್‌.ಎಸ್.ಯು.ಐ. ಕಾರ್ಯಕರ್ತರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಎನ್‌.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಬಾತೀಷ್ ಅಳಕೆಮಜಲು, ಮುಖಂಡರಾದ ತನುಷ್ ಶೆಟ್ಟಿ, ಅಲ್ಪಾಝ್, ಹರ್ಷನ್‌ ಪೂಜಯ, ಸುಖ್ವಿಂದರ್ ಸಿಂಗ್, ಸಾಹಿಲ್ ಮಂಚಿಲ, ವಿಶಾಲ್ ಮತ್ತಿತರರಿದ್ದರು.ಎನ್‌ಎಸ್‌ಯುಐ ಮುತ್ತಿಗೆ ನಾಚಿಕೆಗೇಡು ಸಂಗತಿ: ಸತೀಶ್‌ ಕುಂಪಲ

ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನೆಗೆ ಕಾಂಗ್ರೆಸ್‌ನ ಎನ್‌ಎಸ್‌ಯುಐ ಸಂಘಟನೆ ಮುತ್ತಿಗೆ ಹಾಕಿದ್ದು ನಾಚಿಕೆಗೇಡಿನ ಸಂಗತಿ. ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಆಗದೆ ಹತಾಶೆಯಿಂದ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಿಡಿ ಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಬ್ಬಳಿಕೆಯ ಮತ್ತು ಅರಾಜಕತೆಯ ಆಡಳಿತವನ್ನು ನಡೆಸುತ್ತಿದ್ದು, ಸಣ್ಣ ಪುಟ್ಟ ಗೂಂಡಾಗಳನ್ನು ಬಿಟ್ಟು ಸಂಸದರ ಮನೆಗೆ ಮುತ್ತಿಗೆ ಹಾಕಿಸಿದ್ದಾರೆ. ಸಂಸದರ ಮನೆಯ ಸುತ್ತಲೂ ನಿವೇಶನಗಳಿದ್ದು, ಮಾತ್ರವಲ್ಲ ಸಂಸದರ ಮನೆಯವರೂ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಮುತ್ತಿಗೆ ಹಾಕಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ೮ ತಿಂಗಳು ಕಳೆದರೂ ಅಭಿವೃದ್ದಿ ಮಾಡುತ್ತಿಲ್ಲ, ಗ್ಯಾರಂಟಿಗಳನ್ನು ಸರಿಯಾಗಿ ಜಾರಿ ಮಾಡುತ್ತಿಲ್ಲ. ಯಾವುದೇ ಕೆಲಸ ಮಾಡದೇ ಆನ್‌ಲೈನ್ ಸರಿ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದು, ಡೊಂಬರಾಟದ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಪ್ರತ್ಯುತ್ತರ ಎಚ್ಚರಿಕೆ: ಕಾಂಗ್ರೆಸ್ ಪಕ್ಷ ಯುವಕರನ್ನು ಬಿಟ್ಟು ಈ ರೀತಿಯ ಕೃತ್ಯಗಳನ್ನು ಎಸಗುತ್ತಿದೆ. ಮತ್ತೊಮ್ಮೆ ಸಂಸದರ, ಶಾಸಕರ ಮನೆಗೆ ಮುತ್ತಿಗೆ ಹಾಕುವಂತಹ ಕೆಲಸ ಮಾಡಿದರೆ ನಮ್ಮಲ್ಲಿಯೂ ಯುವ ಮೋರ್ಚಾ, ವಿದ್ಯಾರ್ಥಿ ಸಂಘಟನೆ ಇದೆ, ನಾವು ಅದಕ್ಕೆ ಪ್ರತಿ ಉತ್ತರ ನೀಡಬೇಕಾದೀತು ಎಂದು ಸತೀಶ್‌ ಕುಂಪಲ ಎಚ್ಚರಿಸಿದರು.

ಸುಳ್ಯದಲ್ಲಿ ಬೀಗ ಹಾಕಿಲ್ಲ: ಸುಳ್ಯದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಬಿಜೆಪಿ ಕಾರ್ಯಕರ್ತರೇ ಬೀಗ ಹಾಕಿ ಮುತ್ತಿಗೆ ಹಾಕಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅಲ್ಲಿಗೆ ಭೇಟಿ ನೀಡಿ ಸಭೆ ನಡೆಸಿದ್ದೇನೆ, ಅಂತಹ ಯಾವುದೇ ಘಟನೆ ನಡೆದಿಲ್ಲ. ಎಲ್ಲವೂ ಸರಿ ಇದೆ ಎಂದರು.

ನಮಗೆ ಎಲ್ಲರೂ ಬೇಕು: ಬಿಜೆಪಿ ಸೇರ್ಪಡೆ ಬಗ್ಗೆ ಅರುಣ್ ಕುಮಾರ್‌ ಪುತ್ತಿಲ ಅವರ ಗಡುವಿನ ಬಗ್ಗೆ ಪ್ರತಿಕ್ರಿಯಿಸಿದ ಕುಂಪಲ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಪಕ್ಷಕ್ಕೆ ಎಲ್ಲರೂ ಬೇಕು. ಅರುಣ್ ಕುಮಾರ್ ಪುತ್ತಿಲ ಅವರ ವಿಚಾರದಲ್ಲಿ ರಾಜ್ಯ ನಾಯಕರೊಂದಿಗೆ ಚರ್ಚಿಸಿ, ರಾಜ್ಯದ ನಾಯಕರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್ ಬೊಟ್ಟಾಡಿ, ನಂದನ್ ಮಲ್ಯ, ಮಂಜುಳಾ ಮತ್ತಿತರರು ಇದ್ದರು.

ಚೌಟ ಖಂಡನೆ: ಘಟನೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಖಂಡಿಸಿದ್ದಾರೆ. ಮುಖ್ಯಮಂತ್ರಿ ಮಾತು ಕೇಳಿ ಸಂಸದರ ಮನೆಗಳ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಅನುದಾನದಲ್ಲಿ ಕಡಿಮೆಯಾಗಿದ್ದರೆ ಆಯೋಗದ ಮುಂದೆ ಹೋಗಬೇಕೇ ವಿನಾ ಸಂಸದರ ಮನೆ ಮುಂದೆ ಪ್ರತಿಭಟಿಸಿದರೆ ಏನು ಲಾಭವಿದೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ತೆರಿಗೆ ಹಣದಲ್ಲಿ ದೆಹಲಿಯಲ್ಲಿ ಶೋಕಿ ಮಾಡುತ್ತಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ತಮ್ಮ ವೈಫಲ್ಯತೆಗಳನ್ನು ಮುಚ್ಚಿ ಹಾಕಲು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

 ರಾಜ್ಯದ ಖಜಾನೆ ಬರಿದಾಗಿರುವುದು, ಅಭಿವೃದ್ಧಿ ಸ್ಥಗಿತವಾಗಿರುವುದು, ಬರ ಪರಿಹಾರ ಬಿಡುಗಡೆ ಮಾಡದಿರುವುದರಿಂದ ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಆಕ್ರೋಶದಿಂದ ಕಂಗೆಟ್ಟಿರುವ ಕಾಂಗ್ರೆಸ್ ತನ್ನ ಪಕ್ಷದ ಘಟಕಗಳ ಮೂಲಕ ಇಂತಹ ದಾರಿ ತಪ್ಪಿಸುವ ಪ್ರಚಾರದಲ್ಲಿ ತೊಡಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.