ನೀಟ್ ಅಕ್ರಮ ಉನ್ನತ ತನಿಖೆಗೆ ಎನ್‍ಎಸ್‍ಯುಐ ಆಗ್ರಹ

| Published : Jun 16 2024, 01:46 AM IST

ಸಾರಾಂಶ

ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ತನಿಖೆ ನಡೆಸುವಂತೆ ತಾಲೂಕು ಎನ್‍ಎಸ್‍ಯುಐ ವತಿಯಿಂದ ತಹಸಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲದೆ, ಈಗ ನಡೆದಿರುವ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ಎನ್‍ಎಸ್‍ಯುಐ ವತಿಯಿಂದ ಶನಿವಾರ ತಹಸಿಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ.

ನೀಟ್ ಪರೀಕ್ಷೆ ಫಲಿತಾಂಶ ಪ್ರಶ್ನೆಪತ್ರಿಕೆ ಸೋರಿಕೆ, ಹಾಗೂ ವಿವಾದಾತ್ಮಕ ಕಾರಣಗಳಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟುಗಳ ಆಕಾಂಕ್ಷಿಗಳಿಗೆ ಅನ್ಯಾಯ ವಾಗಿರುತ್ತದೆ. ಒಟ್ಟು 67 ವಿದ್ಯಾರ್ಥಿಗಳು ಪ್ರಥಮ ರ್ಯಾಕ್ ಪಡೆದಿರುವುದು ಮತ್ತು ಬಹಳ ಮುಖ್ಯವಾಗಿ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳಿಗೆ ಪ್ರಥಮ ರ್ಯಾಂಕ್ ಬಂದಿರುವುದು ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ಇವರಲ್ಲಿ ಆರು ವಿಧ್ಯಾರ್ಥಿಗಳು ಒಂದೇ ತರಬೇತಿ ಕೇಂದ್ರದವರಾಗಿರುವುದು ಅನುಮಾನಕ್ಕೆ ಪುಷ್ಠಿ ನೀಡುತ್ತದೆ ಎಂದೂ ಮನವಿಯಲ್ಲಿ ದೂರಲಾಗಿದೆ.

ತರಾತುರಿಯಲ್ಲಿ ಕೃಪಾಂಕ ನೀಡಿರುವುದು ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶದ ದಿನದಂದೇ ನೀಟ್ ಫಲಿತಾಂಶವನ್ನು ಪ್ರಕಟಿಸಿರುವುದು ಅನುಮಾನ ವನ್ನು ಹೆಚ್ಚಿಸುತ್ತದೆ. ನೀಟ್ ಪರೀಕ್ಷೆಯ ಹಗರಣದ ನಂತರ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸುವುದ ರೊಂದಿಗೆ ಈ ಮೊದಲು ನಡೆಸಿರುವ ಪರೀಕ್ಷೆಯನ್ನು ರದ್ದು ಪಡಿಸಿ ಹೊಸದಾಗಿ ಪರೀಕ್ಷೆ ನಡೆಸುವಂತೆಯೂ ತಾಲೂಕು ಎನ್‍ಎಸ್‍ಯುಐ ಅಧ್ಯಕ್ಷ ಸುಜಿತ್ ನೇತೃತ್ವದಲ್ಲಿ ನೀಡಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.