ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗಾವಾರಗೆ ನುಡಿನಮನ

| Published : Jan 20 2025, 01:31 AM IST

ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗಾವಾರಗೆ ನುಡಿನಮನ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೀನಾರಾಯಣ ನಾಗಾವರ ಇತ್ತೀಚೆಗೆ ಮೃತರಾದ ಹಿನ್ನೆಲೆಯಲ್ಲಿ ಮೃತರ ಗೌರವಾರ್ಥ ನುಡಿನಮನ ಜಿಲ್ಲಾ ಶಾಖೆ ಆಯೋಜನೆ ಮಾಡಿತ್ತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಲಕ್ಷ್ಮೀನಾರಾಯಣ ನಾಗಾವಾರ ಇತ್ತೀಚೆಗೆ ಮೃತರಾದ ಹಿನ್ನೆಲೆಯಲ್ಲಿ ಭಾನುವಾರ ಪತ್ರಿಕಾಭವನದಲ್ಲಿ ಮೃತರ ಗೌರವಾರ್ಥ ನುಡಿ ನಮನ ಜಿಲ್ಲಾ ಶಾಖೆ ಆಯೋಜನೆ ಮಾಡಿತ್ತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್. ಪಾಲಾಕ್ಷ ಮಾತನಾಡಿ, ರಾಜ್ಯದೆಲ್ಲೆಡೆ ನಿರಂತರ ಸಂಚಾರ ಮಾಡುವ ಮೂಲಕ ಎಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಹರಿದು ಹಂಚಿಹೋಗಿದ್ದ ದಲಿತ ಸಂಘಟನೆಗಳನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದರು. ಆದರೆ, ಮದ್ಯದಲ್ಲಿಯೇ ಅವರು ಮೃತರಾದ ಹಿನ್ನೆಲೆಯಲ್ಲಿ ಅವರ ಯೋಜನೆ ಸಫಲವಾಗಲಿಲ್ಲ. ದಲಿತ ಸಾಹಿತಿಯೂ ಆಗಿದ್ದರಿಂದ ಸಾಕಷ್ಟು ಪುಸ್ತಕಗಳನ್ನು ಹೊರ ತರುವುದರೊಂದಿಗೆ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಶೋಷಿತರ ಪರವಾಗಿಯೇ ನಿಲ್ಲುತ್ತಿದ್ದ ಅವರು, ಮೃದುಭಾಷಿಕರಾಗಿದ್ದು, ಎಲ್ಲರೊಂದಿಗೂ ಬೆರೆಯುತ್ತಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದಲಿತ ಸಂಘಟನೆಯ ಹಿರಿಯರಾದ ಜಯಪ್ಪ ಹಾನಗಲ್ಲು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಹೋರಾಟದ ದಾರಿ ಹಿಡಿದು, ರಾಜ್ಯದೆಲ್ಲೆಡೆ ಸಂಚರಿಸಿ, ದಲಿತರನ್ನು ಒಂದುಗೂಡಿಸುವ ಮೂಲಕ ಬಲಿಷ್ಠ ಸಂಘಟನೆ ಮಾಡಿದ ಅವರು ಸಂಘಟನಾ ಚತುರರಾಗಿದ್ದರು ಎಂದರು.

ಶಾಂತಳ್ಳಿ ಪ್ಯಾಕ್ಸ್ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಬಿ.ಈ. ಜಯೇಂದ್ರ ಮಾತನಾಡಿ, ಲಕ್ಷ್ಮಿ ನಾರಾಯಣ ನಾಗಾವಾರ ಅವರನ್ನು ಕಳೆದುಕೊಂಡು ಇಡೀ ದಲಿತ ಕುಟುಂಬಗಳು ಬಡವಾಗಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಮಾಡಲು ಹೊರಟಿದ್ದ ದಲಿತರ ಸಂಘಟನೆಯನ್ನು ನಾವು ಮಾಡುವ ಮೂಲಕ, ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜನಾರ್ದನ ಹಾಜರಿದ್ದರು.