ಗದಗ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ನುಲಿಯ ಚಂದಯ್ಯ ಜಯಂತಿ-2026 ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಉದ್ಘಾಟಿಸಿದರು.
ಗದಗ: 12ನೇ ಶತಮಾನದ ಶಿವಶರಣ ನುಲಿಯ ಚಂದಯ್ಯ ಅವರ ಕಾಯಕ ನಿಷ್ಠೆ ಹಾಗೂ ದುಡಿಮೆಯೇ ದೇವರು ಎಂಬ ಸಂದೇಶ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ನುಲಿಯ ಚಂದಯ್ಯ ಜಯಂತಿ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯ ಕಾಯಕದ ಮೂಲಕ ಜೀವನ ನಡೆಸಿ, ತಾವು ದುಡಿದು ಗಳಿಸಿದ ಹಣದಲ್ಲಿಯೇ ಇತರರಿಗೆ ದಾಸೋಹ ಮಾಡುತ್ತಿದ್ದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡ ಮಹಾನ್ ಶರಣರಾಗಿದ್ದರು ಎಂದರು.ನುಲಿಯ ಚಂದಯ್ಯ ಅವರ ಜೀವನ ಹಾಗೂ ವಿಚಾರಧಾರೆ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬಿಯಾಗಿ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ಅವರ ಬದುಕಿನ ಪ್ರಮುಖ ಸಂದೇಶಗಳಾಗಿವೆ. ಇಂತಹ ಮಹನೀಯರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು ಎಂದು ಹೇಳಿದರು.
ದಲಿತ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕ ಮತ್ತು ಸಾಮಾಜಿಕ ನ್ಯಾಯದ ಆಶಯಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಶರಣರ ವಿಚಾರಧಾರೆಗಳು ಸಾಮಾಜಿಕ ಪರಿವರ್ತನೆಗೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಸುಮಾರು 70 ವರ್ಷಗಳ ಕಾಲ ಬದುಕಿದ್ದ ಚಂದಯ್ಯ ಅವರ ಕಾಲಘಟ್ಟ ಹಾಗೂ ಜೀವನದ ಕುರಿತು ಇನ್ನಷ್ಟು ಸಮಗ್ರ ಸಂಶೋಧನೆಗಳು ನಡೆಯಬೇಕಿದೆ ಎಂದು ವಿವರಿಸಿದರು.ಈ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್.ಕೆ.ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಾಬರ್ಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಇದ್ದರು. ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.