ಸಾರಾಂಶ
ಜಿಲ್ಲೆಯಾದ್ಯಂತ ಸತತ ಮಳೆ ಮತ್ತು ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟದರಿಂದ ಉಕ್ಕಿ ಹರಿಯುತ್ತಿರುವ ಭೀಮೆಯ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸಂಖ್ಯೆ ಭಾನುವಾರಕ್ಕೆ 85ಕ್ಕೆ ಏರಿಕೆಯಾಗಿದ್ದು, ಇದೂವರೆಗೆ 53 ಕಾಳಜಿ ತೆರೆದು 6,664 ಜನ ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲೆಯಾದ್ಯಂತ ಸತತ ಮಳೆ ಮತ್ತು ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಟ್ಟದರಿಂದ ಉಕ್ಕಿ ಹರಿಯುತ್ತಿರುವ ಭೀಮೆಯ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸಂಖ್ಯೆ ಭಾನುವಾರಕ್ಕೆ 85ಕ್ಕೆ ಏರಿಕೆಯಾಗಿದ್ದು, ಇದೂವರೆಗೆ 53 ಕಾಳಜಿ ತೆರೆದು 6,664 ಜನ ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.ಜಿಲ್ಲೆಯಲ್ಲಿ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಜಿಲ್ಲೆಯ ಅಫಜಲ್ಪುರ, ಜೇವರ್ಗಿ, ಕಲಬುರಗಿ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಾಳಗಿ, ಶಹಾಬಾದ ತಾಲೂಕಿನಾದ್ಯಂತ ಒಟ್ಟಾರೆ 3,050 ಪುರುಷರು, 2,270 ಮಹಿಳೆಯರು, 1,344 ಮಕ್ಕಳು ಸೇರಿದಂತೆ 6,664 ಜನರನ್ನು ರಕ್ಷಣೆ ಮಾಡಿ ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ಅವರಿಗೆ ಊಟೋಪಚಾರ, ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ, ಆರೋಗ್ಯ ಇಲಾಖೆಯಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಮಳೆಯ ಮುನ್ಸೂಚನೆ ಇರುವ ಕಾರಣ ಸೊನ್ನ ಮತ್ತು ಬೆಣ್ಣೆತೋರಾ ಬ್ಯಾರೇಜಿಗೆ ಬರುವ ನೀರಿನ ಒಳ ಹರಿವಿನ ಪ್ರಮಾಣದಂತೆ ಹೊರ ಹರಿವು ಸಹ ಹೆಚ್ಚಲಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂತ್ರಸ್ತರನ್ನು ರಕ್ಷಣೆಗೆ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ 20 ಸಂಖ್ಯೆ ಬಲ ಹೊಂದಿರುವ ಎನ್.ಡಿ.ಆರ್.ಎಫ್. ತಂಡ ಮತ್ತು ಅಫಜಲಪೂರ ತಾಲೂಕಿನ ಮಣ್ಣೂರನಲ್ಲಿ ಒಂದು ಎಸ್.ಡಿ.ಆರ್.ಎಫ್., ತಂಡ ನಿಯೋಜಿಸಲಾಗಿದೆ. ಇದಲ್ಲದೆ ಇತರೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಪೊಲೀಸ್, ಗೃಹ ರಕ್ಷಕದಳ, ಅಗ್ನಿಶಾಮಕ ತಂಡಗಳು ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.ಪ್ರವಾಹದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಈಗಾಗಲೆ ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣೆ ಮತು ಕಾಳಜಿ ಕೇಂದ್ರ ಉಸ್ತುವಾರಿಗೆ 39 ಜನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಮಾನವ ಹಾನಿ ಮತ್ತು ಪ್ರಾಣಿ ಹಾನಿ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಪ್ರವಾಹದಿಂದ ಅಲ್ಲಲಿ ರಸ್ತೆ ಹಾನಿ, ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಬಂದ್ ಆಗಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ನಿರಂತರ ಮಳೆಯಿಂದ ಅಪಾಯವಿರುವ ಮನೆ ಗೋಡೆ ಸೇರಿದಂತೆ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜಿಲ್ಲಾಡಳಿತ 24 ಗಂಟೆ ಜನರ ರಕ್ಷಣೆಯಲ್ಲಿ ಕಾರ್ಯನಿರತವಾಗಿದೆ ಎಂದರು.ನದಿ ದಂಡೆಗೆ ಹೋಗದಿರಿ:
ಪ್ರವಾಹ ಪರಿಸ್ಥಿತಿಯ ಇಂತಹ ಸಂಕಷ್ಟದ ಸಂದರ್ಭದಲ್ಲಿ ನದಿಯಲ್ಲಿ ಈಜುವುದಾಗಲಿ, ಸ್ಪರ್ಧೆ ಮಾಡುವಂತಹ ಯಾವುದೇ ದುಸ್ಸಾಹಸಕ್ಕೆ ಕೈಹಾಕಬಾರದು. ನದಿ ದಂಡೆಗೆ ಬಟ್ಟೆ ಒಗೆಯಲು, ಕುರಿ-ಆಕಳು ಮೇಯಿಸಲು, ಮೀನುಗಾರರು ಮೀನು ಹಿಡಿಯಲು ಹೋಗಬಾರದು. ಅಪಾಯವಿರುವ ಸೇತುವೆ ಮೇಲೆ ಸಂಚರಿಸಬಾರದು. ನದಿ-ಹಳ್ಳ ದಡದಲ್ಲಿರುವ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಕ್ಕೆ ಹೋಗಬಾರದು ಮತ್ತು ಸೆಲ್ಫಿ, ಫೋಟೊ ತೆಗೆಯಬಾರದು ಎಂದು ಡಿ.ಸಿ. ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.ಸಹಾಯವಾಣಿ ಸ್ಥಾಪನೆ:
ತುರ್ತು ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ತುರ್ತು ಸಂದರ್ಭದಲ್ಲಿ ಈ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದರು.ಜಿಲ್ಲಾ ವಿಪ್ಪತ್ತು ನಿರ್ವಹಣಾ ಕೇಂದ್ರ
08472-278677 ಅಥವಾ 1077, ಕಲಬುರಗಿ ಮಹಾನಗರ ಪಾಲಿಕೆ-08472-241364 ಮತ್ತು 6363544601, ಆಳಂದ-9448135593, ಅಫಜಲಪೂರ-9972874714, ಚಿತ್ತಾಪುರ-9448652111, ಚಿಂಚೋಳಿ-9591499501, ಕಾಳಗಿ-9980034461, ಕಲಬುರಗಿ-8660218494, ಕಮಲಾಪೂರ-9986324648, ಜೇವರ್ಗಿ-7019270898, ಯಡ್ರಾಮಿ-9538559509, ಶಹಾಬಾದ-8152093789 ಹಾಗೂ ಸೇಡಂ-9972473122.