ಸಾಮೂಹಿಕ ಅತ್ಯಾಚಾರ, ಆರೋಪಿಗಳ ಸಂಖ್ಯೆ 12ಕ್ಕೇರಿಕೆ

| Published : Jan 21 2024, 01:31 AM IST

ಸಾರಾಂಶ

ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈವರೆಗೆ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಈವರೆಗೆ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಇತರೆ ಆರೋಪಿಗಳನ್ನು ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದರು.

ಇಲ್ಲಿಯ ಎಸ್ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಮಾಹಿತಿ ನೀಡಿದ ಅವರು, ಅಕ್ಕಿಆಲೂರಿನ ತರಕಾರಿ ವ್ಯಾಪಾರಿ ಇಸ್ಮಾಯಿಲ್‌ ಹುಬ್ಬಳ್ಳಿ (27) ಬಂಧಿತ ಆರೋಪಿಯಾಗಿದ್ದಾನೆ. ಅತ್ಯಾಚಾರದಲ್ಲಿ ಭಾಗಿಯಾದ 7 ಆರೋಪಿಗಳು ಹಾಗೂ ಹಲ್ಲೆ ಇತರೆ ಅಪರಾಧಗಳಲ್ಲಿ ಭಾಗಿಯಾದ 5 ಆರೋಪಿಗಳು ಸೇರಿದಂತೆ ಇದುವರೆಗೆ 12 ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರೆ ಆರೋಪಿಗಳನ್ನು ಬಂಧಿಸುವ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.

ಬ್ಯಾಡಗಿ ನೈತಿಕ ಪೊಲೀಸ್‌ಗಿರಿ, ತಂಡ ರಚನೆ:

ಬ್ಯಾಡಗಿಯಲ್ಲಿ ನಡೆದ ನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, ನಾಪತ್ತೆಯಾಗಿರುವ ಇನ್ನಿಬ್ಬರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದರು.

ಬ್ಯಾಡಗಿ ತಾಲೂಕಿನ ಅಗಸನಹಳ್ಳಿಗೆ ಹಬ್ಬಕ್ಕಾಗಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಬೈಕ್‌ನಲ್ಲಿ ತೆರಳಿದ್ದರು. ಮಾರ್ಗ ಮಧ್ಯೆ ಮಾತನಾಡುತ್ತಾ ನಿಂತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮುಸ್ಲಿಂ ಯುವಕರ ಗುಂಪು, ಹಿಂದೂ ಯುವಕನ ಜೊತೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು ಎಳೆದಾಡಿ, ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 7 ಆರೋಪಿಗಳನ್ನು ಬಂಧಿಸಿದ್ದೇವೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಬೀಟ್‌ ಪೊಲೀಸಿಂಗ್‌, ಗಸ್ತು ಹೆಚ್ಚಿಸಲಾಗಿದೆ. ಬ್ಯಾಡಗಿಯಲ್ಲಿ ಘಟನೆ ನಡೆದು 10 ನಿಮಿಷಯದಲ್ಲಿ ಪೊಲೀಸರು ಸ್ಥಳದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.