ಸಾರಾಂಶ
ಕುಕನೂರು: ಕೂಸಿನ ಮನೆಗಳು ಮಕ್ಕಳ ಆರೈಕೆಯ ತಾಣ ಎಂದು ಬೆಣಕಲ್ ಗ್ರಾಪಂ ಅಧ್ಯಕ್ಷ್ಯೆ ಲಕ್ಷ್ಮವ್ವ ಜಂಬಣ್ಣ ನಡುವಲಮನಿ ಹೇಳಿದರು.ತಾಲೂಕಿನ ಬೆಣಕಲ್ ಗ್ರಾಪಂ ವ್ಯಾಪ್ತಿಯ ಸಮುದಾಯ ಭವನದಲ್ಲಿ ಮಾಡಿರುವ ಕೂಸಿನಮನೆ ಉದ್ಘಾಟಿಸಿ ಮಾತನಾಡಿದ ಅವರು, ಕೂಸಿನ ಮನೆಗಳನ್ನು ಮಾದರಿಯಾಗಿ ನಿರ್ವಹಿಸಬೇಕು. ಆರೈಕೆದಾರರು ಕೇಂದ್ರಕ್ಕೆ ಬರುವ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಮಕ್ಕಳು ದೇವರ ಸಮಾನ. ಮಕ್ಕಳನ್ನು ಸರಿಯಾಗಿ ಆರೈಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಮಕ್ಕಳ ಮನಸ್ಸಿಗೆ ನೋವಾಗುವಂತೆ ಯಾರೂ ನಡೆದುಕೊಳ್ಳಬಾರದು ಎಂದರು.ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ, ರಾಜ್ಯಾದ್ಯಂತ 4000 ಕೂಸಿನ ಮನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಂತೆ ಕುಕನೂರ ತಾಲೂಕಿನ ಬೆಣಕಲ್ ಗ್ರಾಪಂನಲ್ಲಿ ಕೂಸಿನ ಮನೆ ಆರಂಭಿಸಲಾಗಿದ್ದು, ಕೇಂದ್ರದಲ್ಲಿ 9 ತಿಂಗಳಿನಿಂದ 3 ವರ್ಷದ ಮಕ್ಕಳ ಲಾಲನೆ, ಪಾಲನೆ, ಪೋಷಣೆಯನ್ನು ತರಬೇತಿ ಹೊಂದಿದ ಆರೈಕೆದಾರರಿಂದ ಈ ಕೇಂದ್ರದಲ್ಲಿ ನಡೆಯಲಿದೆ ಎಂದರು.ಸಾಮಾನ್ಯವಾಗಿ 3 ವರ್ಷದ ಮಕ್ಕಳ ಮಾನಸಿಕ ಮತ್ತು ಭೌತಿಕ ಬೆಳವಣಿಗೆ ಸಾಮಾನ್ಯರಿಗಿಂತ ಶೇ.200 ಪಟ್ಟು ಹೆಚ್ಚು ಇರುತ್ತದೆ. ಅದಕ್ಕಾಗಿ ಕೇಂದ್ರದಲ್ಲಿ ಕ್ರಿಯಾತ್ಮಕ ಚಟುವಟಿಕೆಗಳು, ಬಣ್ಣ ಗುರುತಿಸುವುದು, ಭಾಷಾ ಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ದಿನಚರಿಯ ಪ್ರಕಾರ ಚಟುವಟಿಕೆ ಮಾಡಿಸಲಾಗುತ್ತದೆ. ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ಹಾಲು, ಕಿಚಿಡಿ, ಕಡ್ಲೆ ಉಂಡೆ, ಪಲಾವ್, ಅನ್ನ-ಬೇಳೆಸಾರು, ಮೊಟ್ಟೆ, ಬಾಳೆಹಣ್ಣು, ಗೋದಿ ಸಜ್ಜಕ, ತರಕಾರಿಗಳನ್ನು ನೀಡಲಾಗುತ್ತದೆ ಎಂದರು.ಪಿಡಿಒ ಬಿ.ಕೃಷ್ಣಾರಡ್ಡಿ, ಗ್ರಾಪಂ ಸದಸ್ಯರಾದ ಅನ್ನಮ್ಮ ಬಸವರಾಜ ತಿಪ್ಪರಸನಾಳ, ಮಲ್ಲಪ್ಪ ಬಳಿಗೇರ, ಶ್ರೀಕಾಂತ ಕರಿಗಾರ, ಮುದುಕಣ್ಣ ಸಣ್ಣೆಪ್ಪ ವಜ್ರಬಂಡಿ, ಸುಮಂಗಲಾ ವಜ್ರಬಂಡಿ, ಮುಖಂಡರಾದ ಜಂಬಣ್ಣ ನಡುವಲಮನಿ, ನಿಂಗಪ್ಪ ಹಂಚಿನಾಳ, ಗ್ರಾಪಂ ಸಿಬ್ಬಂದಿ, ಗ್ರಂಥಪಾಲಕರು, ಗ್ರಾಮ ಕಾಯಕ ಮಿತ್ರರಾದ ಸವಿತಾ ಗೂಳಪ್ಪ ಮುತ್ತಾಳ, ಅಂಗನವಾಡಿ ಕಾರ್ಯಕರ್ತರಾದ ಅಂಬಮ್ಮ ವಜ್ರಬಂಡಿ, ಲಲಿತಾ ಕಡಗದ್, ಆರೈಕೆದಾರರಾದ ಜಯಶ್ರೀ, ಈರಮ್ಮ, ಕೇಂದ್ರದ ಮಕ್ಕಳು ಇದ್ದರು.