ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗಸಂಸ್ಥೆ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ (ಎಂಸಇಓಎನ್) ಇದರ 36ನೇ ಪ್ರಶಸ್ತಿ ಪ್ರದಾನ ಮತ್ತು ವಾರ್ಷಿಕೋತ್ಸವ ಶುಕ್ರವಾರ ಕೆಎಂಸಿಯ ಡಾ. ಟಿ.ಎಂ.ಎ. ಪೈ ಆಡಿಟೋರಿಯಂನಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದ ಮಾಹೆಯ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ನರ್ಸಿಂಗ್ ಕೇವಲ ಒಂದು ವೃತ್ತಿಯಲ್ಲ. ಅವರು ಆರೋಗ್ಯ ವ್ಯವಸ್ಥೆಗಳ ಬೆನ್ನೆಲುಬಾಗಿದ್ದಾರೆ. ಇಂದಿನ ತಂತ್ರಜ್ಞಾನಗಳ ನಡುವೆಯೂ ದಾದಿಯರು ಒದಗಿಸುವ ಸಹಾನುಭೂತಿ, ವಹಿಸುವ ಕಾಳಜಿ, ಮಾನವ ಸ್ಪರ್ಶ ಮತ್ತು ಆರೈಕೆಯು ರೋಗಿಗಳ ಆರೋಗ್ಯದಲ್ಲಿ ಗಣನೀಯ ಪಾತ್ರ ವಹಿಸುತ್ತದೆ ಎಂದರು. ದಾದಿಯರ ವೈದ್ಯಕೀಯ ಸಾಮರ್ಥ್ಯ, ಸಹಾನುಭೂತಿಯ ಆರೈಕೆ, ಸಮಗ್ರ ವೃತ್ತಿಪರತೆ ಮತ್ತು ಪರಿಣಾಮಕಾರಿ ಸಂವಹನಗಳು ಅಗತ್ಯವಾದ ನಾಲ್ಕು ಗುಣಗಳು, ಅವುಗಳನ್ನು ಬೆಳೆಸಿಕೊಳ್ಳುವಂತೆ ದಾದಿಯರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮನೋವೈದ್ಯಕೀಯ ನರ್ಸಿಂಗ್ ವಿಭಾಗದ ಸಹ ಡೀನ್ ಡಾ. ಟೆಸ್ಸಿ ಟ್ರೀಸಾ ಜೋಸ್ ಸ್ವಾಗತಿಸಿದರು. ಡೀನ್ ಡಾ. ಜುಡಿತ್ ಎ. ನೊರೊನ್ಹಾ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ದಾದಿಯರ ಸಂಘದ ಅಧ್ಯಕ್ಷ ರೆನಾನ್ ಡಿಸೋಜಾ ಸಂಘದ ವರದಿಯನ್ನು ಮಂಡಿಸಿದರು, ಸಹಾಯಕ ಪ್ರಾಧ್ಯಾಪಕಿ ರಂಜನಿ ಪಿ. ವಂದಿಸಿದರು.ಸುಹಾನಿ ಚಂದರ್ ಅತ್ಯುತ್ತಮ ವಿದ್ಯಾರ್ಥಿ:ಈ ಸಮಾರಂಭದಲ್ಲಿ ಸುಹಾನಿ ಚಂದರ್ (2021–2025 ಬಿಎಸ್ಸಿ ನರ್ಸಿಂಗ್ ಬ್ಯಾಚ್) ಅವರಿಗೆ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ, ಶರೋನ್ ಅನಿಷ್ಕಾ ಡಿಸೋಜಾ ಅವರಿಗೆ ಅತ್ಯುತ್ತಮ ಬಿಎಸ್ಸಿ ನರ್ಸಿಂಗ್ ಕ್ಲಿನಿಕಲ್ ಪರಿಣತಿ ಪ್ರಶಸ್ತಿಯನ್ನು, ನೇಹಾ ಶ್ರೀಕುಮಾರ್ ಅವರಿಗೆ 2025 ರ ಬಿಎಸ್ಸಿ ನರ್ಸಿಂಗ್ ಪ್ರಥಮ ರ್‍ಯಾಂಕ್‌ನ್ನು ನೀಡಿ ಗೌರವಿಸಲಾಯಿತು.
ಪ್ರತಿಭಾ ಕಾಮತ್ ಅತ್ಯುತ್ತಮ ಪ್ರಾಧ್ಯಾಪಕಿ: 2024–2025ರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ನರ್ಸಿಂಗ್ ವಿಭಾಗದ ಹಿರಿಯ ಸ್ಕೇಲ್ ಸಹಾಯಕ ಪ್ರಾಧ್ಯಾಪಕಿ ಪ್ರತಿಭಾ ಕಾಮತ್ ಮತ್ತು ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಫ್ಲೇವಿಯಾ ಶಾರ್ಲೆಟ್ ನೊರೊನ್ಹಾ ಅವರಿಗೆ ಮತ್ತು 2025ರ ಅತ್ಯಂತ ಸಾಧನೆ ಮಾಡಿದ ಸಿಬ್ಬಂದಿ ಪ್ರಶಸ್ತಿಯನ್ನು ಡಾ. ಎಲ್ಸಾ ಸನತೋಂಬಿ ದೇವಿ ಅವರಿಗೆ ಸಂಸ್ಥೆಯ ಮಾಜಿ ಡೀನ್ ಡಾ. ಅನಿಸ್ ಜಾರ್ಜ್ ಪ್ರದಾನ ಮಾಡಿದರು.