ನಮ್ಮ ಆಸ್ಪತ್ರೆಯಲ್ಲಿ ಪ್ರತಿವರ್ಷ ಶುಶ್ರೂಷಕ ದಿನವನ್ನು ಆಚರಿಸುತ್ತೇವೆ. ಶಿಸ್ತು ಮತ್ತು ಬದ್ಧತೆಯಿಂದ ರೋಗಿಗಳಿಗೆ ಸೇವೆ ಸಲ್ಲಿಸಿ ಉಪಚರಿಸುತ್ತಿರುವ ಎಲ್ಲಾ ಶುಶ್ರೂಷಕರಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಮೈಸೂರುಶುಶ್ರೂಷಕರು ವೈದ್ಯರ ಸಲಹೆ ಪಡೆದು ರೋಗಿಗಳನ್ನು ಉಪಚರಿಸಬೇಕು ಎಂದು ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ವಿಶ್ರಾಂತ ಹಿರಿಯ ಶುಶ್ರೂಷಕ ಮೇಲ್ವಿಚಾರಕ ಗೋವಿಂದಾಚಾರಿ ಹೇಳಿದರು.ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ನಡೆದ ದಾದಿಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಇದು 206ನೇ ಶುಶ್ರೂಷಕರ ದಿನವಾಗಿದ್ದು, ಶುಶ್ರೂಷಕರು ಯಾವುದೇ ಕೆಲಸದಲ್ಲಿ ಶಿಸ್ತು, ಸಂಯಮ, ಕಾಳಜಿ ಇರಬೇಕು. ಶುಶ್ರೂಷಕರಿಲ್ಲದೆ ಆಸ್ಪತ್ರೆ ಇಲ್ಲ ಎಂದರು.ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್. ಜ್ಞಾನಶಂಕ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಪ್ರತಿವರ್ಷ ಶುಶ್ರೂಷಕ ದಿನವನ್ನು ಆಚರಿಸುತ್ತೇವೆ. ಶಿಸ್ತು ಮತ್ತು ಬದ್ಧತೆಯಿಂದ ರೋಗಿಗಳಿಗೆ ಸೇವೆ ಸಲ್ಲಿಸಿ ಉಪಚರಿಸುತ್ತಿರುವ ಎಲ್ಲಾ ಶುಶ್ರೂಷಕರಿಗೆ ಅಭಿನಂದನೆ ಎಂದರು. ನಿರ್ದೇಶಕಿ ಮತ್ತು ಹಿರಿಯ ಮಕ್ಕಳ ತಜ್ಞೆ ಡಾ. ರಾಜೇಶ್ವರಿ ಮಾದಪ್ಪ ಮಾತನಾಡಿ, ರೋಗಿ ಮತ್ತು ವೈದ್ಯರೊಡನೆ ನೇರ ಸಂಪರ್ಕ ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ. ಆದ್ದರಿಂದ ವೈದ್ಯರಿಗೆ ಮತ್ತು ಆಸ್ಪತ್ರೆಗೆ ಒಳ್ಳೆಯ ಹೆಸರು ಬರುತ್ತದೆ. ಇವರೆಲ್ಲರ ಸೇವೆ ಸದಾ ಹೀಗೆ ಇರಲಿ ಎಂದು ಆಶಿಸಿದರು. ಡಾ. ಅನಿಕೇತ್ ಪ್ರಭಾಕರ್, ಡಾ. ರಾಕೇಶ್ ರಾಜೇ ಅರಸ್, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.