ಯಲಬುರ್ಗಾ: ಜಗತ್ತಿನೆಲ್ಲೆಡೆ ಜನರ ಪುನರ್ವಸತಿ ಮತ್ತು ಯೋಗಕ್ಷೇಮಕ್ಕಾಗಿ ದುಡಿಯುವವರಲ್ಲಿ ದಾದಿಯರೂ ಪ್ರಮುಖರು ಎಂದು ಡಾ. ವಿವೇಕ ವಾಗುಲೆ ಹೇಳಿದರು.
ಪಟ್ಟಣದ ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಪ್ಯಾರ್ ಮೇಡಿಕಲ್ ಕಾಲೇಜ್ ಆವರಣದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ದಾದಿಯರ ದಿನ ಹಾಗೂ ಪೌಷ್ಟಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನನ,ಮರಣದ ಸಮಯದಲ್ಲಿ ಜೊತೆಗಿರುವ ಅವರ ಸೇವೆಗೆ ಗೌರವ ಸೂಚಿಸಲೆಂದೇ ಪ್ರತಿವರ್ಷ ಮೇ ೧೨ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತಿದೆ. ವೈದ್ಯ ವೃತ್ತಿ ಸಾಮಾನ್ಯವಾಗಿ ಭಗವಂತನಿಗೆ ಸಮನಾಗಿ ಕಾಣಲಾಗುತ್ತದೆ. ವೈದ್ಯರಿಗಿಂತ ಮೊದಲು ರೋಗಿಗಳನ್ನು ಉಪಚರಿಸುವವರು ದಾದಿಯರು. ವೈದ್ಯರ ಮಾರ್ಗದರ್ಶನದಂತೆ ಕಾಯಿಲೆಯಿಂದ ಬಳಲುತ್ತಿರುವವರನ್ನು ಉಪಚರಿಸಿ ಆರೈಕೆ ಮಾಡುವ ಶೂಶ್ರೂಷಕಿಯರು ಪ್ರಶಂಸೆಗೆ ಅರ್ಹರು ಎಂದರು.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ದಾದಿಯರು ಜೀವದ ಹಂಗನ್ನೇ ತೊರೆದು ಹಗಲಿರುಳು ಶ್ರಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದವರ ಶುಶ್ರೂಷೆಗಾಗಿ ಅವರು ತೋರಿದ ಉತ್ಸಾಹ ಮತ್ತು ಕಾಳಜಿ ಅನುಕರಣೀಯ. ದಾದಿಯರು ನಮ್ಮೆಲ್ಲರ ಪಾಲಿಗೆ ಎರಡನೇ ತಾಯಂದಿರಿದ್ದಂತೆ. ರೋಗಿಗಳ ಶುಶ್ರೂಷೆಗೆ ಸಹಾಯ ಮಾಡುವ ಎಲ್ಲ ಸಿಬ್ಬಂದಿ ಶ್ಲಾಘನೆಗೆ ಅರ್ಹರು ಎಂದು ಹೇಳಿದರು.ಪೌಷ್ಟಿಕ ದಿನ ಪ್ರಯುಕ್ತ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಮಹತ್ವ ಪ್ರತಿಬಿಂಬಿಸುವ ವಿವಿಧ ನ್ಯೂಟ್ರಿಷನ್ ಆಹಾರ ಪದಾರ್ಥ ಸಿದ್ಧಪಡಿಸಿ ವಿವಿಧ ತಂಡಗಳಿಂದ ಪ್ರದರ್ಶಿಸಲಾಯಿತು.
ವಿದ್ಯಾರ್ಥಿಗಳು ತಯಾರಿಸಿದ ನ್ಯೂಟ್ರಿಷನ್ ಪದಾರ್ಥ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರದ ಪೌಷ್ಟಿಕ ಮೌಲ್ಯ ವಿನ್ಯಾಸ ಮತ್ತು ಪ್ರಸ್ತುತಿಯ ಆಧಾರದ ಮೇಲೆ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು.
ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ರಂಗನಾಥ ವಲ್ಮಕೊಂಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪ್ರಾಚಾರ್ಯ ಪ್ರಾಣೇಶ ವಲ್ಮಕೊಂಡಿ, ಡಾ. ರಮೇಶ, ಗುರುರಾಜ ಮಂಜುಳಾ, ಆಡಳಿತಾಧಿಕಾರಿ ಲೋಕೇಶ ಲಮಾಣಿ, ಅಕ್ಷಯ ಕುಮಾರ ಪತ್ತಾರ, ಶಿಕ್ಷಕರಾದ ವಿಜಯಾ ಕುಂಬಾರ, ಅಮೃತಾ ಹೊಸಳ್ಳಿ, ಭೂಮಿಕಾ ಪೊಲೀಸ್ ಪಾಟೀಲ್, ಪ್ರೀತಿ ನೂಲ್ವಿ, ಸಂಗೀತಾ ಅಕಾರಿ, ರತ್ನಾ.ಡಿ.ಎಚ್.,ನಾಸಿರ್ ಹುಸೇನ್ ಹವಾಲ್ದಾರ, ರಾಜು ಕಮ್ಮಾರ, ಆನಂದ ಜರಕುಂಟಿ ಸೇರಿದಂತೆ ಮತ್ತಿತರರು ಇದ್ದರು.