ಸಮಾಜದ ಆರೋಗ್ಯಕ್ಕಾಗಿ ಶುಶ್ರೂಷಕರ ಕೊಡುಗೆ ಗಮನಾರ್ಹವಾಗಿದೆ. ನರ್ಸಿಂಗ್ ಪದವಿಧರರಾಗಿ ವೃತ್ತಿಕ್ಷೇತ್ರ ಪ್ರವೇಶಿಸುತ್ತಿರುವ ನಿಮ್ಮ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಡಾ.ರಿಯಾಜ್ ಬಾಷಾ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮಾಜದ ಆರೋಗ್ಯಕ್ಕಾಗಿ ಶುಶ್ರೂಷಕರ ಕೊಡುಗೆ ಗಮನಾರ್ಹವಾಗಿದೆ. ನರ್ಸಿಂಗ್ ಪದವಿಧರರಾಗಿ ವೃತ್ತಿಕ್ಷೇತ್ರ ಪ್ರವೇಶಿಸುತ್ತಿರುವ ನಿಮ್ಮ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಡಾ.ರಿಯಾಜ್ ಬಾಷಾ ಹೇಳಿದರು.ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ಧಿ ಭವನದಲ್ಲಿ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ಕಾಲೇಜ್, ಬಿವಿವಿ.ಎಸ್.ಕೆ. ನರ್ಸಿಂಗ್ ಕಾಲೇಜ್ ಮತ್ತು ಶಾರದಾಂಬೆ ನರ್ಸಿಂಗ್ ಕಾಲೇಜ್ ಈ ಮೂರು ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪದವಿಧರರಾಗುವುದೆಂದರೆ ಅವಲಂಬನೆಯಿಂದ ಸ್ವಾವಲಂಬನೆಯತ್ತ ಪಯಣ. ನಿಮ್ಮ ಯಶಸ್ಸಿನಲ್ಲಿ ಪಾಲಕರ ಮತ್ತು ಶಿಕ್ಷಕರ ಶ್ರಮವಿದೆ. ಶಿಕ್ಷಣ ನೀಡಿದ ಸಂಸ್ಥೆಗೆ ಗೌರವ ತರುವಂತೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ.ಚರಂತಿಮಠ ಅವರು ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಸಿಬ್ಬಂದಿ ಕೊಡುಗೆ ಗಮನಾರ್ಹವಾಗಿದೆ. ಶುಶ್ರೂಷಕ ಸಿಬ್ಬಂದಿ ಆರೋಗ್ಯ ಕ್ಷೇತ್ರದ ಬೆನ್ನೆಲುಬು ಇದ್ದಂತೆ. ಕೋವಿಡ್ ಸಂದರ್ಭದಲ್ಲಿ ನಸಿಂಗ್ ವೃತ್ತಿ ಪರಿಣತರು ಸಲ್ಲಿಸಿದ ಸೇವೆ ಅಭಿನಂದನಾರ್ಹವಾಗಿದೆ. ನರ್ಸಿಂಗ್ ವಿಜ್ಞಾನದಲ್ಲಿ ಪದವಿ ಪಡೆದು ವೃತ್ತಿಕ್ಷೇತ್ರಕ್ಕೆ ಕಾಲಿಡುತ್ತಿರುವ ನೀವು ಸೇವಾಮನೋಭಾವ ಮೈಗೂಡಿಸಿಕೊಳ್ಳಿ ಎಂದು ಹೇಳಿದರು.ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 243 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನರ್ಸಿಂಗ್ ಪಿ.ಜಿ ಕೋರ್ಸ್‌ನಲ್ಲಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ಮಹೇಶ್ವರಿ ಶಿರೋಳ ಅವರನ್ನು ಸನ್ಮಾನಿಸಲಾಯಿತು. ನರ್ಸಿಂಗ್ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದ ಡಾ.ಸ್ಟಿಫನ್ ಜಾನ್ ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರ ಪಡೆದದ್ದು ವಿಶೇಷವಾಗಿತ್ತು.
ಆರ್ಯ ಮತ್ತು ತಂಡದವರ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ಡೀನ್, ಫ್ಯಾಕಲ್ಟಿ ಆಫ್ ನರ್ಸಿಂಗ್ ಮತ್ತು ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ ನಾಟೆಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಎನ್.ಜಿ. ಪಾಟೀಲ ಪರಿಚಯಿಸಿದರು. ಡಾ.ಶಾಂಭವಿ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ವೇದಿಕೆಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ.ಎನ್. ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ. ಸಜ್ಜನ (ಬೇವೂರ), ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯರಾದ ಡಾ.ದಿಲೀಪ ನಾಟೆಕರ್, ಪ್ರೊ.ಜಯಶ್ರೀ ಇಟ್ಟಿ ಮತ್ತು ಡಾ.ಪ್ರವೀಣ ಪಾಟೀಲ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ.ರಿಯಾಜ್ ಬಾಷಾ ಅವರನ್ನು ಸನ್ಮಾನಿಸಲಾಯಿತು.
ಡಾ.ಶ್ರೀಹರ್ಷ ವಂದಿಸಿದರು. ಡಾ.ರೇಣುಕರಾಜ ನಾಗಮ್ಮನವರ್ ನಿರೂಪಿಸಿದರು. ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ಅಂಗಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಮಿತ್ರರು, ಮಹಾವಿದ್ಯಾಲಯದ ಬೋಧಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಬಿವಿವಿ ಸಂಘದಡಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೆಡಿಕಲ್, ಡೆಂಟಲ್, ಆಯುರ್ವೇದ, ಹೊಮಿಯೋಪತಿ, ನರ್ಸಿಂಗ್, ಫಾರ್ಮಸಿ ಎಲ್ಲ ಪ್ರಕಾರದ ಶಿಕ್ಷಣ ಕೇಂದ್ರ ಸ್ಥಾಪಿಸಲಾಗಿದೆ. ಒಟ್ಟಾರೆ ಡಾ.ವೀರಣ್ಣ ಚರಂತಿಮಠ ಅವರು ನೂರಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರರೆನಿಸಿಕೊಂಡಿರುವರು.
- ಡಾ.ರಿಯಾಜ್ ಬಾಷಾ ಕುಲಸಚಿವರು, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ