ಬ್ಯಾಡಗಿ:ಆಹಾರ ಧಾನ್ಯಗಳಲ್ಲಿ ನುಸಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಗಳು ಊಟ ಮಾಡಲು ಹಿಂದೇಟು ಹಾಕಿ, ಬಿಸಿಯೂಟ ಸ್ಥಗಿತಗೊಂಡ ಘಟನೆ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.
ಅಡುಗೆ ತಯಾರಕ ಸಿಬ್ಬಂದಿ ಹಾಗೂ ಶಿಕ್ಷಕರ ನಿರ್ಲಕ್ಷ್ಯದಿಂದ ಆಹಾರಧಾನ್ಯದಲ್ಲಿ ನುಸಿಗಳು ಕಂಡು ಬಂದಿದ್ದು, ಸದರಿ ಶಾಲೆಯಲ್ಲಿನ ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಿಸಿಯೂಟ ವಂಚಿತರಾಗಿದ್ದಾರೆ.ಘಟನೆ ಹಿನ್ನೆಲೆ: ಶಾಲೆಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿ, ಬೇಳೆ, ಗೋಧಿ ಸೇರಿದಂತೆ ಹಾಲಿನ ಪ್ಯಾಕೆಟ್ ಪೂರೈಸಲಾಗಿದೆ. ಅಕ್ಟೋಬರ್ ತಿಂಗಳ ರಜೆಯಿದ್ದ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳಲ್ಲಿ ನುಸಿ ಸೇರಿದಂತೆ ಹುಳುಗಳು ಸೇರಿಕೊಂಡು ಊಟಕ್ಕೆ ಯೋಗ್ಯವಿಲ್ಲ.ಅಡುಗೆ ಕಾರ್ಯಕರ್ತರು ಪ್ರತಿದಿನವೂ ಸ್ವಚ್ಛಗೊಳಿಸಿ ಬಿಸಿಯೂಟ ತಯಾರಿಸುತ್ತಿದ್ದು, ಅಕ್ಕಿ ಹಾಗೂ ಬೇಳೆ ಕಾಳುಗಳಲ್ಲಿ ನುಸಿ ಕಾಣಿಸಿಕೊಳ್ಳುತ್ತಿವೆ, ಈ ಕುರಿತು ಮುಖ್ಯ ಶಿಕ್ಷಕರ ಗಮನಕ್ಕೆ ತಂದರೂ ಮುಖ್ಯ ಶಿಕ್ಷಕರು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.ಪಾಲಕರಿಗೆ ತಲುಪಿದ ಸುದ್ದಿ:ಅನ್ನದಲ್ಲಿ ನುಸಿಯಿರುವುದನ್ನು ಮಕ್ಕಳು ಪಾಲಕರಿಗೆ ತಿಳಿಸಿದ್ದು, ಬಹುತೇಕ ಮಕ್ಕಳು ಊಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ, ಸದರಿ ವಿಷಯ ತಿಳಿದ ಪಾಲಕರು ಮುಖ್ಯ ಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆ ಮಾಡದ ಮುಖ್ಯಶಿಕ್ಷಕಿ ಸೋಮವಾರ ಇದ್ದಕ್ಕಿದ್ದಂತೆ ಬಿಸಿಯೂಟ ಸ್ಥಗಿತಗೊಳಿಸಿದ್ದಾರೆ.ನಾಳೆ ಸರಿಪಡಿಸಲಾಗುವುದು:ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಕರ್ತವ್ಯಕ್ಕೆ ಇದೀಗ ಅಧಿಕಾರ ವಹಿಸಿಕೊಂಡಿದ್ದೇನೆ, ತಡಸ ಶಾಲೆಯ ಮುಖ್ಯ ಶಿಕ್ಷಕರು ನುಸಿಯಿದ್ದ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ, ಶಿಕ್ಷಕರಿಗೆ ಬಿಸಿಯೂಟ ಸ್ಥಗಿತಗೊಳಿಸಲು ಅವಕಾಶವಿಲ್ಲ. ತುರ್ತು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದು ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಸಂತ ಬೀರಣ್ಣನವರ ಹೇಳಿದರು.
ಕಳೆದ 3 ತಿಂಗಳ ಹಿಂದೆ ಅಕ್ಕಿಬೇಳೆ ಪೂರೈಸಲಾಗಿದ್ದು ಸುಮಾರು 8 ಕ್ವಿಂಟಲ್ ಅಕ್ಕಿ, 25 ಕಿಲೋ ಬೇಳೆ ಉಳಿದಿವೆ. ಇದರಲ್ಲಿ ನುಸಿಗಳು ವಿಪರೀತವಾಗಿದ್ದು, ಸ್ವಚ್ಛಗೊಳಿಸಿದರೂ ಬಳಕೆಗೆ ಬಾರದಂತಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ತೊಂದರೆ ತಪ್ಪಿಸಲು ಸೋಮವಾರದಿಂದ ಬಿಸಿಯೂಟ ಸ್ಥಗಿತಗೊಳಿಸಿದ್ದೇನೆ. ಗುಣಮಟ್ಟದ ಆಹಾರಧಾನ್ಯ ಪೂರೈಸುವವರೆಗೂ ಬಿಸಿಯೂಟ ತಯಾರಿಸುವುದಿಲ್ಲ ಎಂದು ಮುಖ್ಯ ಶಿಕ್ಷಕಿ ಐ.ಪಿ. ಕಂಗೂರಿ ಹೇಳಿದರು.