ಸಾರಾಂಶ
ಹಾವೇರಿ: ಹಾವೇರಿ ತಾಲೂಕಿನಲ್ಲಿ ಈವರೆಗೆ ೨೬೨.೧೨ ಮಿಮೀ ಮಳೆಯಾಗಿದ್ದು, ಪ್ರಸಕ್ತ ತಿಂಗಳಲ್ಲಿ ಕಳೆದ ೮ರಿಂದ ೧೦ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಬೆಳವಣಿಗೆ ಕುಂಠಿತವಾಗಿರುವ ಮುಸುಕಿನಜೋಳದ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಗೊಬ್ಬರಗಳನ್ನು ಬೇರುಗಳ ಮೂಲಕ ಬೆಳೆಗಳು ಹೀರಿಕೊಳ್ಳಲು ಸಾಧ್ಯವಾಗದೆ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಕಾರಣ ಪೋಷಕಾಂಶಗಳನ್ನು ಎಲೆಗಳಿಗೆ ಸಿಂಪಡಣೆ ಮಾಡುವುದು ಸೂಕ್ತವಾಗಿದೆ. ಇದಕ್ಕಾಗಿ ನೀರಿನಲ್ಲಿ ಕರಗುವ ಗೊಬ್ಬರಗಳಾದ ೧೯-೧೯-೧೯, ೦-೫೨-೩೪, ೧೮-೧೮-೧೮, ೧೩-೦-೪೫ ಇವುಗಳಲ್ಲಿ ಯಾವುದಾದರೂ ಒಂದನ್ನು ಪ್ರತೀ ಲೀಟರ್ ನೀರಿಗೆ ೫-೧೦ ಗ್ರಾಂನಷ್ಟು ಲಘುಪೋಷಕಾಂಶ ಮಿಶ್ರಣದೊಂದಿಗೆ ಸಿಂಪಡಿಸಬೇಕು. ದ್ರವ ರೂಪದ ೪ ಪೋಷಕಾಂಶಗಳುಳ್ಳ ಲಘು ಪೋಷಕಾಂಶಗಳ ಮಿಶ್ರಣ, ಜಿಂಕ್ ಸಲ್ಫೇಟ್ ಹಾಗೂ ಇತರೆ ಲಘುಪೋಷಕಾಂಶಗಳು ತಾಲೂಕಿನ ಹಾವೇರಿ ಕರ್ಜಗಿ ಹಾಗೂ ಗುತ್ತಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯತಿ ದರದಲ್ಲಿ ಲಭ್ಯವಿದ್ದು ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಯೂರಿಯಾ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಬೆಳೆಗಳಲ್ಲಿ ರೋಗ ಕೀಟಗಳ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ. ಆದ್ದರಿಂದ ೩೦ ದಿನಗಳ ನಂತರದ ಗೋವಿನಜೋಳ ಬೆಳೆಗೆ ಪ್ರತಿ ಎಕರೆಗೆ ೨೫ರಿಂದ ೩೦ ಕೆ.ಜಿ. ಮಾತ್ರ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಕೊಟ್ಟು ಎಡೆಕುಂಟೆ ಹೊಡೆಯುವುದು ಸೂಕ್ತ. ಪೊಟ್ಯಾಷ್ ರಸಗೊಬ್ಬರವನ್ನು ಬಳಸುವುದರಿಂದ ಬೆಳೆಗಳಿಗೆ ರೋಗ ಹಾಗೂ ಕೀಟ ನಿರೋಧಕ ಶಕ್ತಿಯು ಬರುತ್ತದೆ. ಮೆಕ್ಕೆಜೋಳದಲ್ಲಿ ಲದ್ದಿಹುಳುಬಾಧೆ ಕಂಡುಬಂದಲ್ಲಿ ಎಮಾಮೆಕ್ಟಿನ್ ಬೆನ್ಜೋಯೇಟ್ ಕೀಟನಾಶಕವನ್ನು ೦.೫ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಗೂ ಕೇದಿಗೆ ರೋಗ ಕಂಡುಬಂದಲ್ಲಿ ರಿಡೋಮಿಲ್ ರೋಗನಾಶಕವನ್ನು ೨ಗ್ರಾಂ ಪ್ರತಿ ಲೀಟರ್ ನೀರಿಗೆ ಸಿಂಪಡಿಸಬೇಕೆಂದು ಮಾಹಿತಿ ನೀಡಿದರು.ಹೊಲದಲ್ಲಿ ನೀರು ನಿಲ್ಲದಂತೆ ಹೊರ ಹಾಕಲು ಕ್ರಮ ವಹಿಸುವುದರಿಂದ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದ್ದಾರೆ.