ಪೌಷ್ಟಿಕ ಆಹಾರ ಸ್ಥಗಿತ: ಕಿಚಡಿ ಕೇಂದ್ರವಾದ ಅಂಗನವಾಡಿ

| Published : Mar 15 2024, 01:15 AM IST / Updated: Mar 16 2024, 03:12 PM IST

ಸಾರಾಂಶ

ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂರ್ನಾಲ್ಕು ತಿಂಗಳಿಂದ ಮೊಟ್ಟೆ ವಿತರಣೆ ಸ್ಥಗಿತವಾಗಿದೆ.ಹೇಗೋ ಅಂಗನವಾಡಿ ಕಾರ್ಯಕರ್ತೆಯರು ಸಾಲ ಮಾಡಿ ಮೊಟ್ಟೆ ಖರೀದಿಸಿಕೊಂಡು ಮಕ್ಕಳಿಗೆ ವಿತರಣೆ ಮಾಡಿದರೂ ಸರ್ಕಾರ ಮಾತ್ರ ಹಣ ಬಿಡುಗಡೆ ಆಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಳೆದ ಎರಡು ತಿಂಗಳಿಂದ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಸರಬರಾಜಾಗದೆ ಬರೀ ಕಿಚಡಿ ಮಾತ್ರ ಪೂರೈಸುತ್ತಿರುವುದರಿಂದ ಮಕ್ಕಳು ಕಿಚಡಿ ತಿನ್ನಲು ಹಿಂದೇಟು ಹಾಕುತ್ತಿರುವುದರಿಂದ ಪೋಷಕರು ಅಂಗನವಾಡಿ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. 

ಸರ್ಕಾರ ಗ್ರಾಮೀಣ ಹಾಗೂ ಪಟ್ಟಣದ ಸ್ಲಂ ಪ್ರದೇಶಗಳಲ್ಲಿರುವ ಪುಟ್ಟ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಿ ಅವರ ಆರೋಗ್ಯ ರಕ್ಷಣೆ ಮಾಡುವ ಸಲುವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ಜೊತೆಗೆ ನಿತ್ಯ ಅನ್ನ, ಸಾಂಬಾರು, ಮೊಟ್ಟೆ ಹಾಗೂ ಚಿಕ್ಕಿ ವಿತರಿಸಲು ನಿರ್ಧರಿಸಿ ಅದರಂತೆ ಎಲ್ಲಾ ಕೇಂದ್ರಗಳಿಗೆ ಸರಬರಾಜು ಸಹ ಮಾಡುತ್ತಿತ್ತು.

ಪ್ರತಿದಿನ ಕಿಚಡಿ ಊಟ: ಆದರೆ ಕಳೆದ ಎರಡು ತಿಂಗಳಿಂದ ಪೌಷ್ಟಿಕ ಆಹಾರ ಇಲ್ಲ. ಅಕ್ಕಿ,ಬೇಳೆ ಮೊಟ್ಟೆಗಳನ್ನು ಸರಬರಾಜು ಮಾಡದೆ ಬರೀ ಕಿಚಡಿ ಮಾತ್ರ ಸರಬರಾಜು ಮಾಡುತ್ತಿದೆ. 

ಆದರೆ ಪುಟ್ಟ ಮಕ್ಕಳು ನಿತ್ಯ ಕಿಚಡಿ ತಿಂದು ಈಗ ಕಿಚಡಿ ಎಂದರೆ ಮೂಗುಮುರಿಯುವಂತಾಗಿದೆ. ವಿಧಿಯಿಲ್ಲದೆ ಕೆಲ ಮಕ್ಕಳು ಅದನ್ನೆ ತಿಂದರೆ, ಉಳಿದವರು ನಿರಾಕರಿಸುತ್ತಿದ್ದಾರೆ. 

ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿಲ್ಲವೆಂದು ತಿಳಿದು ಪೋಷಕರು ತಮ್ಮ ಮಕ್ಕಳಿಗೆ ಊಟಕ್ಕೆ ಮನೆಗೇ ಬರುವಂತೆ ಹೇಳುತ್ತಿದ್ದಾರೆ.

ಪೌಷ್ಟಿಕ ಆಹಾರ ನಾಪತ್ತೆ: ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಊಟ ಮಾಡದೆ ಮಕ್ಕಳು ಮಲಗುವಂತಾಗಿದೆ. ಇದನ್ನು ಅರಿತ ಪಾಲಕರು ಅನ್ನ ಸಾಂಬಾರು ಮೊಟ್ಟೆ ನೀಡಿ ಎಂದು ಕಾರ್ಯಕರ್ತೆಯರ ಮೇಲೆ ಒತ್ತಡ ಹಾಕುತ್ತಿರುವುದರಿಂದ ಕಾರ್ಯಕರ್ತೆಯರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. 

ನೆನೆಸಿದ ಕಾಳುಗಳು, ಅನ್ನ ಸಾಂಬಾರು, ರೈಸ್ ಬಾತ್, ಮೊಟ್ಟೆ ಹಾಗೂ ಇತರೆ ಪೌಷ್ಟಿಕ ಆಹಾರ ನಾಪತ್ತೆಯಾಗಿದೆ. ಜನವರಿ ತಿಂಗಳಿಂದ ಕಿಚಡಿ ಪೊಟ್ಟಣಗಳನ್ನು ಬಿಟ್ಟರೆ ಮತ್ತೇನೂ ಸರ್ಕಾರ ಸರಬರಾಜು ಮಾಡಿಲ್ಲ,

ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಮೂರ್ನಾಲ್ಕು ತಿಂಗಳಿಂದ ಮೊಟ್ಟೆ ವಿತರಣೆ ಸ್ಥಗಿತವಾಗಿದೆ.ಹೇಗೋ ಅಂಗನವಾಡಿ ಕಾರ್ಯಕರ್ತೆಯರು ಸಾಲ ಮಾಡಿ ಮೊಟ್ಟೆ ಖರೀದಿಸಿಕೊಂಡು ಮಕ್ಕಳಿಗೆ ವಿತರಣೆ ಮಾಡಿದರೂ ಸರ್ಕಾರ ಮಾತ್ರ ಅದರ ಹಣ ನೀಡದೆ ವಿಳಂಬ ಮಾಡುತ್ತಿರುವುದರಿಂದ ಈಗ ಅದೂ ಸ್ಥಗಿತವಾಗಿದೆ.

ಮೊಟ್ಟೆ, ಮಿಠಾಯಿ ಯಾವುದೂ ಇಲ್ಲ: ಕಡಿಮೆ ಮಕ್ಕಳ ಸಂಖ್ಯೆ ಇರುವ ಕಡೆ ಕಾರ್ಯಕರ್ತೆಯರು ವಾರದಲ್ಲಿ ಒಂದೆರಡು ದಿನ ಅರ್ಧ ಮೊಟ್ಟೆ ನೀಡಿ ಸಾಗ ಹಾಕುತ್ತಿದ್ದರೆ, ಮೊಟ್ಟೆ ಹಾಗೂ ಇತರೇ ಪೌಷ್ಟಿಕ ಆಹಾರಕ್ಕಾಗಿ ಮಕ್ಕಳು ಹಠಹಿಡಿದರೆ ಅವರನ್ನು ಸಮಾಧಾನಪಡಿಸಲು ಶೇಂಗಾ ಮಿಠಾಯಿ ನೀಡಲು ಅದೂ ಪೂರೈಕೆಯಾಗುತ್ತಿಲ್ಲ ನಾವೇನು ಮಾಡೋದು ಎಂದು ಹೆಸರು ಹೇಳಲು ಇಚ್ಚಿಸದ ಕಾರ್ಯಕರ್ತೆಯೊಬ್ಬರು ತಮ್ಮ ಅಳಲನ್ನು ಹೇಳಿಕೊಂಡರು.

ದಿನಸಿ ಪಾದಾರ್ಥಗಳನ್ನು ಸರ್ಕಾರ ಸರಬರಾಜು ಮಾಡದೆ ಕೈಬಿಟ್ಟಿರುವ ಸರ್ಕಾರ ಎಲ್ಲಾದಕ್ಕೂ ಕಿಚಡಿ ಕಡೆ ಬೆರಳು ತೋರಿಸುತ್ತಿದೆ. ಮಕ್ಕಳು ಕಿಚಡಿ ತಿನ್ನುತ್ತಿಲ್ಲ. ಮಾಡಿದ ಅಡುಗೆ ತಿಪ್ಪೆ ಸೇರುತ್ತಿದೆ. 

ಮೇಲಾಧಿಕಾರಿಗಳ ಗಮನಕ್ಕೆ ತಂದರೆ ದಿನಬಿಟ್ಟು ದಿನ ಕೊಡಿ ಎನ್ನುತ್ತಾರೆ. ಕಿಚಡಿ ತಿನ್ನಲು ಮನಸು ಇಲ್ಲದ ಮಕ್ಕಳು ಬರೀ ಹೊಟ್ಟೆಯಲ್ಲಿ ಹಸಿದುಕೊಂಡು ಮನೆ ಹೋಗುವಂತಾಗಿದೆ.

ಈಗ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಿರುವ ಕಿಚಡಿ ಪೊಟ್ಟಣಗಳು ಮಾರ್ಚ್‌ಗೆ ಅಂತ್ಯವಾಗಲಿದೆ, ಏಪ್ರಿಲ್‌ನಿಂದ ಏನು ಸರಬರಾಜು ಮಾಡುತ್ತಾರೋ ಕಾದು ನೋಡಬೇಕು. 

ಮುಂದಿನ ತಿಂಗಳೂ ಇದೇ ಕಿಚಡಿ ಸರಬರಾಜು ಮಾಡಿದರೆ ಮಕ್ಕಳು ಅಂಗನವಾಡಿ ಕೇಂದ್ರಗಳತ್ತ ಸುಳಿಯುವುದೇ ಅನುಮಾನವಾಗಿದೆ.