ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಸಾಮೂಹಿಕ ಹೊಣೆಗಾರಿಕೆ: ಜಿಲ್ಲಾಧಿಕಾರಿ

| Published : Mar 15 2024, 01:15 AM IST

ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಸಾಮೂಹಿಕ ಹೊಣೆಗಾರಿಕೆ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜೀವ ಜಲ ಉಳಿಸಿ ಅಭಿಯಾನಕ್ಕೆ ಬ್ಯಾಂಕ್ ಆಫ್ ಬರೋಡಾದ ಎಲ್ಲ ಶಾಖೆಗಳ ಮೂಲಕ ಸಹಕಾರ ನೀಡುವುದಾಗಿ ಬ್ಯಾಂಕ್‌ನ ಮಹಾ ಪ್ರಬಂಧಕ ಮತ್ತು ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಣ್ಣು, ನೀರು, ಗಾಳಿ ಸೇರಿದಂತೆ ನೈಸರ್ಗಿಕ ಸಂಪತ್ತಿನ ಮಿತ ಬಳಕೆ, ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ನಿವಾಸದಲ್ಲಿ ಗುರುವಾರ ಜಿಲ್ಲಾಡಳಿತ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಯುವ ರೆಡ್ ಕ್ರಾಸ್ ಘಟಕ, ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಹಮ್ಮಿಕೊಂಡ ಜೀವ ಜಲ ಉಳಿಸಿ ಅಭಿಯಾನದ ಜಲ ಸಂರಕ್ಷಣೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ, ನೀರಿನ ಪಾತ್ರೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಈ ನೈಸರ್ಗಿಕ ಸಂಪತ್ತು ಜಗತ್ತಿನ ಈಗಿನ ಮತ್ತು ಭವಿಷ್ಯದ ಸಕಲ ಜೀವರಾಶಿಗಳಿಗೆ ಸೇರಿದೆ. ಇದನ್ನು ಮಿತವಾಗಿ ಬಳಸುವುದು, ಉಳಿಸುವುದು ಅತಿ ಅಗತ್ಯ. ಪ್ರತಿಯೊಬ್ಬರು ಈ ಬೇಸಗೆಯ ಸಂದರ್ಭದಲ್ಲಿ ನೀರು ಉಳಿಸುವ ಮತ್ತು ಪ್ರಾಣಿ, ಪಕ್ಷಿಗಳ ಜೀವ ರಕ್ಷಣೆಗೆ ತಮ್ಮ ಮನೆಯ ಹಿತ್ತಲಲ್ಲಿ ಸಣ್ಣ ಪಾತ್ರೆಗಳಲ್ಲಿ ನೀರು ಇಡುವ ಮೂಲಕ ಜೀವ ರಕ್ಷಣೆಯ ಕೆಲಸದಲ್ಲಿ ಕೈಜೋಡಿಸಬೇಕಾಗಿದೆ ಎಂದು ಮುಲ್ಲೈ ಮುಗಿಲನ್ ಮನವಿ ಮಾಡಿದರು.

ಜೀವ ಜಲ ಉಳಿಸಿ ಅಭಿಯಾನಕ್ಕೆ ಬ್ಯಾಂಕ್ ಆಫ್ ಬರೋಡಾದ ಎಲ್ಲ ಶಾಖೆಗಳ ಮೂಲಕ ಸಹಕಾರ ನೀಡುವುದಾಗಿ ಬ್ಯಾಂಕ್‌ನ ಮಹಾ ಪ್ರಬಂಧಕ ಮತ್ತು ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ಮುಖ್ಯ ಪ್ರಬಂಧಕ ಸತೀಶ್ ಪಾಟ್ಕರ್, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ವಿಜಯ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್, ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಗಾಯತ್ರಿ ಎನ್., ಮನಪಾ ಅಭಿಯಂತರ ಅಶ್ವಿನ್, ಇಂಡಿಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯ ರವೀಂದ್ರನಾಥ ಉಚ್ಚಿಲ್ ಇದ್ದರು.

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ನಿರೂಪಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ವಂದಿಸಿದರು.