ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅನ್ವಯ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಿಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆ, ವಿಶ್ವವಿದ್ಯಾಲಯಗಳ ಫಲಕದಲ್ಲಿರುವ ಹೆಸರುಗಳು, ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು ಮತ್ತು ಪದನಾಮಗಳನ್ನು ಸೂಚಿಸುವ ಫಲಕಗಳು ಪ್ರಮುಖವಾಗಿ ಕನ್ನಡದಲ್ಲಿ ಇರತಕ್ಕದೆಂದು ಸೂಚಿಸಿದರು. ..
ಜಿಲ್ಲೆಯ ರಸ್ತೆ, ಬಡಾವಣೆ ಪ್ರದೇಶಗಳ ಹೆಸರು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಅಳವಡಿಸಲಾದ ಫಲಕಗಳಲ್ಲಿ, ವಿವಿಧ ಇಲಾಖೆ, ಸ್ಥಳೀಯ ಸಂಸ್ಥೆಗಳ ಪ್ರಕಟಣೆಗಾಗಿ ಹೊರಡಿಸಲಾದ ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ, ಅನುದಾನಿತ, ಅನುದಾನ ರಹಿತ ಸಂಸ್ಥೆ ನಡೆಸುವ ಕಾರ್ಯಕ್ರಮಗಳ ಕುರಿತು ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರಾನಿಕ್ಸ್ ಪ್ರದರ್ಶನ ಫಲಕ ಮಾಹಿತಿ, ನೋಟಿಸ್‌ಗಳು ಹಾಗೂ ರಸೀದಿ, ಬಿಲ್ಲುಗಳು ಸಹ ಪ್ರಮುಖವಾಗಿ ಕನ್ನಡದಲ್ಲಿ ಇತರಬೇಕು ಎಂದರು.ಸ್ಥಳೀಯ ಪ್ರಾಧಿಕಾರಗಳ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ, ವ್ಯಾಪಾರ ಸಂಸ್ಥೆಗಳು, ವಿನ್ಯಾಸಗಳು, ಸಮಾಲೋಚನ ಕೇಂದ್ರಗಳು, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನ ಕೇಂದ್ರ, ಹೋಟೆಲ್ ಮುಂತಾದವುಗಳ ಹೆಸರುಗಳನ್ನು ಪ್ರದರ್ಶಿಸಲು ನಾಮಫಲಕ ಮೇಲ್ಬಾಗದಲ್ಲಿ ಶೇ.60 ರಷ್ಟು ಕನ್ನಡದಲ್ಲಿ ಇರತಕ್ಕದ್ದು, ಶೇ.40 ರಷ್ಟು ಯಾವುದೇ ಬೇರೆ ಭಾಷೆ ಬಳಸಬಹುದಾಗಿದೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕರೊಂದಿಗಿನ ತನ್ನ ಎಲ್ಲ ಸಂಪರ್ಕ, ಪತ್ರ ವ್ಯವಹಾರದಲ್ಲಿಯೂ ಸಹ ಕನ್ನಡ ಭಾಷೆಯನ್ನು ಬಳಸತಕ್ಕದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಜಾರಿ ಪ್ರಾಧಿಕಾರವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಅಧಿಕೃತ ಭಾಷೆಯನ್ನು ಸರ್ಕಾರಿ ಅಧಿಕಾರಿಗಳು ಪಾಲಿಸಲು ವಿಫಲವಾದಲ್ಲಿ ಸಮಿತಿಯಿಂದ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪುನಿತ್, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಇತರರು ಇದ್ದರು.
---ಬಾಕ್ಸ್...
ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆ, ಅಂಗಡಿ, ಫಾರ್ಮ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಕನ್ನಡ ನಾಮಫಲಕ ಅಳವಡಿಸಲು ವಿಫಲವಾದಲ್ಲಿ ಮೊದಲ ಅಪರಾಧಕ್ಕಾಗಿ ₹5 ಸಾವಿರಕ್ಕೂ ಹೆಚ್ಚು ದಂಡ, ಎರಡನೇ ಅಪರಾಧಕ್ಕಾಗಿ ₹10 ಸಾವಿರ ದಂಡ, ನಂತರದ ಪ್ರತಿ ಅಪರಾಧಕ್ಕಾಗಿ ₹20 ಸಾವಿರಕ್ಕೂ ಅಧಿಕ ದಂಡ ಹಾಕುವುದರ ಜೊತೆಗೆ ಪರವಾನಗಿ ರದ್ದುಗೊಳಿಸಲಾಗುವುದು.