ಅಪೌಷ್ಟಿಕತೆ ನಿವಾರಣೆಗೆ ನೂತನ ಯೋಜನೆ ರೂಪಿಸಿದೆ. ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳು ಬಳಲಬಾರದು.

ಹೂವಿನಹಡಗಲಿ: ಪೌಷ್ಟಿಕ ಆಹಾರವು ಮಕ್ಕಳಲ್ಲಿ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ತಾಲೂಕಿನ ಮಿರಾಕೊರ್ನಹಳ್ಳಿಯ ಶ್ರೀ ಶರಣಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಹಾರ ಯೋಜನೆ ಹಾಗೂ ಸಿಇಪಿಎಂಐಜೆಡ್‌ ಯೋಜನೆ ಅಡಿಯಲ್ಲಿ ಶಾಲಾ ಅವಧಿಯ ನಂತರ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳ,ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹೊಸ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ದಿನ ವೇಳಾಪಟ್ಟಿಯಂತೆ ಕಾಳು, ಶೇಂಗಾ, ಹಣ್ಣು ಸೇವನೆಯಿಂದ ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಅಪೌಷ್ಟಿಕತೆ ನಿವಾರಣೆಗೆ ನೂತನ ಯೋಜನೆ ರೂಪಿಸಿದೆ. ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳು ಬಳಲಬಾರದು. ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸದೃಢ ಆರೋಗ್ಯ ಹೊಂದಬೇಕು ಎಂಬುದು ನಮ್ಮ ಆಶಯವಾಗಿದೆ ಎಂದ ಅವರು, ಇಲಾಖೆಯ ನಿಯಮಾನುಸಾರ ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ಎಸ್ಡಿಎಂಸಿ ಅಧ್ಯಕ್ಷ ಎಚ್‌.ಆರ್‌. ಮಹಮದ್ ರಫಿ, ಎಂ.ಜಗದೀಶ್, ಹನುಮಂತ ರೆಡ್ಡಿ, ಶರಣೇಗೌಡ, ಬಸಮ್ಮ, ಕಾಳಮ್ಮ ಉಪಸ್ಥಿತರಿದ್ದರು.

ಮುಖ್ಯ ಗುರು ಸೂರ್ಯಕಾಂತ ಬಾರಿಕರ ಸ್ವಾಗತಿಸಿದರು. ಶಿಕ್ಷಕ ಸಿಬ್ಬಂದಿ, ಬಿಸಿಯೂಟ ತಯಾರಕರು ಇದ್ದರು.