ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪೌಷ್ಟಿಕ ಆಹಾರ

| Published : Sep 29 2024, 01:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಒಂದರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಒಂದರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಆರು ದಿನ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಚಾಲನೆ ನೀಡಿದರು.

ಪಟ್ಟಣದ ಹೊಸೂರ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಾಸಕನಾದ ಮೇಲೆ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ಪಟ್ಟಣದ ಹೊಸೂರ ಸರ್ಕಾರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೌಚಾಲಯ ಹಾಗೂ ಕಾಂಪೌಂಡ್‌ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಪ್ರಾರಂಭ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಸತಿ ಸಹಿತ ಗುಣಮಟ್ಟದ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಮಾತನಾಡಿ, ಅಪೌಷ್ಟಿಕ ನಿವಾರಣೆ ಹಾಗೂ ಮಕ್ಕಳ ದಾಖಲಾತಿ ಹೆಚ್ಚಳದ ಸಲುವಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಜೊತೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಇದರಿಂದ ತಾಲೂಕಿನ ಸುಮಾರು 148 ಶಾಲೆಯ, 23 ಸಾವಿರ ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆಯುತ್ತಾರೆ ಎಂದು ಎಲ್ಲರಿಗೂ ಸ್ವಾಗತ ಕೋರಿದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಅರವಿಂದ ಡೋಣೂರ ಮಾತನಾಡಿ, ರಾಜ್ಯ ಸರ್ಕಾರದ ಅಕ್ಷರ ದಾಸೋಹದ, ಮಧ್ಯಾಹ್ನ ಉಪಹಾರ ಯೋಜನೆ ಅಡಿ ಅಜಿಂ ಪ್ರೇಮ್ ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ₹ 1500 ಕೋಟಿ ಮೂರು ವರ್ಷಗಳ ಕಾಲ ನೀಡಲಾಗುತ್ತದೆ. ಇದರಿಂದ ರಾಜ್ಯದ ಸುಮಾರು 55 ಸಾವಿರ ಶಾಲೆ, 55 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದರಿಂದ ಪೌಷ್ಟಿಕ ಆಹಾರದ ಜೊತೆ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ಪಪಂ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಪಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಿಗಾರ, ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಶಾಂತಯ್ಯ ಜಡಿಮಠ, ಕಾಸಪ್ಪ ಜಮಾದಾರ, ಕಾಸು ಭಜಂತ್ರಿ, ಸಿಂಧೂರ ಡಾಲೇರ, ಸುಮಂಗಲಾ ಸೇಬೆನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಬೇವನೂರ, ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಜಿ.ಯಂಕಂಚಿ, ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಡಗಿ, ಶಿಕ್ಷಣ ಸಂಯೋಜಕ ಎಸ್.ಎಂ.ಕಪನಿಂಬರಗಿ, ನಾಮನಿರ್ದೇಶಿತ ಸದಸ್ಯರಾದ ರಾಜು ಮೇಟಗಾರ, ಹುಸೇನ, ಮುಖಂಡರಾದ ಕಾಸು ಕಡ್ಲೇವಾಡ, ಸೋಮು ದೇವೂರ, ಪ್ರಕಾಶ ಮಲ್ಹಾರಿ, ಚೌದರಿ, ವಿನೋದ ಚವ್ಹಾಣ, ಮುನೀರ್ ಅಹ್ಮದ್ ಮಳಖೇಡ, ಮಹಾಂತೇಶ, ವೀರೇಶ ಕುದುರಿ ಮುಂತಾದವರು ಇದ್ದರು. ಶಿಕ್ಷಕ ನಾಗೇಶ ನಾಗೂರ ನಿರೂಪಿಸಿ, ಶಿಕ್ಷಕ ಜಿ.ಪಿ.ಬಿರಾದಾರ ವಂದಿಸಿದರು.

ಕೋಟ್‌

ಸರ್ಕಾರ ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಂಡಿದೆ. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಸುಮಾರು ₹ 1500 ಕೋಟಿ ನೀಡುವ ಮೂಲಕ ಯೋಜನೆಗೆ ಸಹಕಾರ ನೀಡಿದ್ದಾರೆ.

ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕ