ಸಾರಾಂಶ
ಕುಶಾಲನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಅವರು ರಾಜಿನಾಮೆ ಕೊಡುವ ಅಗತ್ಯ ಬರೋದಿಲ್ಲ ಎಂದು ಪಶು ಸಂಗೋಪನ ಮತ್ತು ರೇಷ್ಮೆ ಖಾತೆ ಸಚಿವ ಕೆ ವೆಂಕಟೇಶ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ತನಿಖೆಗೆ ಆದೇಶ ಬಂದಿದೆ. ವರದಿ ಬಂದ ಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.
ಬಿ ಎಸ್ ಯಡಿಯೂರಪ್ಪ ಅವರು ಲೋಕಾಯುಕ್ತ ವರದಿ ಬಂದ ನಂತರ ರಾಜಿನಾಮೆ ನೀಡಿರುವುದಾಗಿ ವೆಂಕಟೇಶ್ ನೆನಪಿಸಿದರು.
ಮಡಿಕೇರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಲ್ಲ ರೂಪದ ಷಡ್ಯಂತ್ರ ನಡೆಯುತ್ತಿದೆ. ರಾಜಕೀಯ ಷಡ್ಯಂತ್ರದಲ್ಲಿ ಬೇರೆ ಬೇರೆ ಅಂಶಗಳಿವೆ. ಅವೆಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.
ಮಡಿಕೇರಿ ತಾಲೂಕಿನ ಚೇರಂಬಾಣೆಯಲ್ಲಿ ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ. ಅದರಿಂದ ಅದರ ಬಗ್ಗೆ ಸಮಾಲೋಚನೆ ಮಾಡುವುದು ಸಹಜ. ನ್ಯಾಯಾಲಯದಲ್ಲಿ ಏನು ಏನೆಲ್ಲಾ ನಡೆಯುತ್ತಿದೆ. ಅದಕ್ಕೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸಬೇಕಲ್ಲ. ಸಿಬಿಐ ತನಿಖೆಗೆ ಕೊಡಿ ಎಂದು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅದರ ಸಾಧಕ ಭಾದಕಗಳನ್ನು ಚರ್ಚೆ ಮಾಡಿದ್ದೇವೆ ಎಂದರು.
ಪ್ರಕರಣದ ತನಿಖೆಯನ್ನು ಯಾರಾದರೂ ಮಾಡಿಕೊಳ್ಳಲಿ. ಈ ಬಗ್ಗೆ ಮುಖ್ಯಮಂತ್ರಿಗಳು ಮೊದಲಿನಿಂದಲೂ ಹೇಳಿದ್ದಾರೆಂದು ಪೊನ್ನಣ್ಣ ಪ್ರತಿಕ್ರಿಯಿಸಿದರು.