ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಆಧುನಿಕತೆ ಬೆಳೆದಂತೆ ಸ್ಮಾರ್ಟ್ ಕೆಲಸಗಳಾಗುತ್ತಿದ್ದು, ದೈಹಿಕ ಶ್ರಮವಿಲ್ಲದ ಜೀವನ ನಡೆಯುತ್ತಿದೆ. ಅನೇಕ ಯುವಕರು ಕೆಲಸದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ದುಶ್ಚಟಗಳಿಂದ ಅನಾರೋಗ್ಯ, ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿವೆ. ದೇಹದ ಪ್ರಮುಖ ಅಂಗ ಹೃದಯವನ್ನು ಅತ್ಯಂತ ಕಾಳಜಿಯಿಂದ ಕಾಪಾಡಿಕೊಳ್ಳಬೇಕು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಹ್ರದ್ರೋಗ ವಿಭಾಗ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಒತ್ತಡದ ಜೀವನ, ಆಲ್ಕೊಹಾಲ್ ಸೇವನೆ ಹಾಗೂ ಧೂಮ್ರಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಹೃದಯವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ಉತ್ತಮ ಹವ್ಯಾಸ ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಮದ್ಯ ಮತ್ತು ಧೂಮ್ರಪಾನದಿಂದ ಹೃದಯಾಘಾತಕ್ಕೆ ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದರು.
ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಸಂಜಯ ಪೋರವಾಲ ಮಾತನಾಡಿ, ವೈದ್ಯರ ಹತ್ತಿರ ಹೋಗುವ ಬದಲು ನಿಯಮಿತವಾಗಿ ವ್ಯಾಯಾಮ, ಆಹಾರ ಪದ್ಧತಿ ಸೇರಿದಂತೆ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಇತ್ತೀಚಿನ ಅಹಾರ ಪದ್ಧತಿ, ಆರೋಗ್ಯಕ್ಕೆ ಮಾರಕವಾದ ಪದಾರ್ಥಗಳು, ಪೌಷ್ಟಿಕ ಆಹಾರದ ಕೊರತೆ, ಹೃದ್ರೋಗ ಹೆಚ್ಚಲು ಕಾರಣವಾಗುತ್ತಿವೆ. ಆದ್ದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿದಿನ ಒಂದು ಗಂಟೆಯಾದರೂ ವ್ಯಾಯಾಮ, ನಡಿಗೆ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಹಿರಿಯ ಹೃದ್ರೋಗ ತಜ್ಞವೈದ್ಯರಾದ ಡಾ.ಸುರೇಶ ಪಟ್ಟೇದ, ಡಾ. ವಿಜಯಾನಂದ ಮೆಟಗುಡಮಠ, ಡಾ.ಪ್ರಸಾದ ಎಂ.ಆರ್., ಡಾ.ಸಮೀರ್ ಅಂಬರ, ಡಾ.ವಿಶ್ವನಾಥ ಹೆಸರೂರ, ಡಾ.ಡ್ಯಾನಿಶ್ ಮೆಮೂನ್ ಇತರರು ಇದ್ದರು.