ನಮ್ಮ ಆಹಾರ ಪದ್ಧತಿಯಲ್ಲೇ ನಮ್ಮ ಆರೋಗ್ಯವಿದೆ. ಸಮತೋಲನ ಆಹಾರ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಹುಟ್ಟಿನಿಂದಲೇ ಹಲವು ಕಾಯಿಲೆಗಳು ಬರಲಾರಂಭಿಸಿವೆ. ನಮ್ಮ ಆರೋಗ್ಯಕ್ಕೆ ಸಿರಿಧಾನ್ಯ, ಹಸಿರು ತರಕಾರಿ ಅವಶ್ಯವಾಗಿ ಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಆಹಾರ ಸೇವನೆ ಅವಶ್ಯ. ಸೊಪ್ಪು, ತರಕಾರಿ, ಕಾಳುಗಳ ಸೇವನೆಯಿಂದ ಅಪೌಷ್ಟಿಕತೆಯನ್ನು ದೂರವಿಡಬಹುದು ಎಂದು ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಂದಿನಿ ಅಭಿಪ್ರಾಯಪಟ್ಟರು.

ಸಮೀಪದ ಗೋವಿಂದನಹಳ್ಳಿ ಗ್ರಾಮದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಚಿಗುರು ಜ್ಞಾನ ವಿಕಾಸ ಕೇಂದ್ರದವರು ಆಯೋಜಿಸಿದ್ದ ಪೌಷ್ಟಿಕಾಂಶ ಆಹಾರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಆಹಾರ ಪದ್ಧತಿಯಲ್ಲೇ ನಮ್ಮ ಆರೋಗ್ಯವಿದೆ. ಸಮತೋಲನ ಆಹಾರ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಹುಟ್ಟಿನಿಂದಲೇ ಹಲವು ಕಾಯಿಲೆಗಳು ಬರಲಾರಂಭಿಸಿವೆ. ನಮ್ಮ ಆರೋಗ್ಯಕ್ಕೆ ಸಿರಿಧಾನ್ಯ, ಹಸಿರು ತರಕಾರಿ ಅವಶ್ಯವಾಗಿ ಬೇಕಿದೆ. ರೋಗ ನಿರೋಧಕ ಶಕ್ತಿ, ಲವಲವಿಕೆಯ ಆರೋಗ್ಯಕರ ಬದುಕಿಗೆ ನಾರಿನಾಂಶ, ಸತ್ವಯುತ, ಪೌಷ್ಠಿಕಾಂಶಭರಿತ ಆಹಾರವನ್ನು ನಿತ್ಯ ಬಳಕೆ ಮಾಡುವ ಅವಶ್ಯಕತೆ ಇದೆ ಎಂದರು.

ಗ್ರಾಪಂ ಅಧ್ಯಕ್ಷ ಕುಮಾರ್ ಮಾತನಾಡಿ, ಹಿಂದೆ ರೈತರು ಗಟ್ಟಿಮುಟ್ಟಾಗಿ ಶತಾಯುಷಿಗಳಾಗಿ ಬದುಕುತ್ತಿದ್ದರು. ಅವರಿಗೆ ಗೊತ್ತಿದ್ದ ಸಂಗತಿ ಎಂದರೆ ಬೆಳಗ್ಗೆ ಎದ್ದು ರಾಗಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಮೊಸರಿನ ತಿಂಡಿ. ಮಧ್ಯಾಹ್ನ ಬಿಸಿ ಮುದ್ದೆ, ಹುರುಳಿ ಸಾಂಬಾರು.ರಾತ್ರಿ ಸ್ವಲ್ಪಅನ್ನ. ತರಕಾರಿ ಸಾಂಬಾರು. ಇದನ್ನು ಬಿಟ್ಟರೆ ಹಬ್ಬಹರಿದಿನಗಳಲ್ಲಿ ಬೆಲ್ಲದ ಪಾಯಸ, ಬೂಂದಿ ಅಷ್ಟೆ. ಎಲ್ಲವೂ ರಾಸಾಯನಿಕ ಮುಕ್ತವಾಗಿದ್ದ ಪರಿಣಾಮ ತೋಳದಂತೆ ಕೆಲಸ ಮಾಡುತ್ತಿದ್ದರು ಎಂದು ನೆನೆಸಿಕೊಂಡರು.

ಪ್ರಾಥಮಿಕ ಆರೋಗ್ಯಅಧಿಕಾರಿ ಲಿಂಗರಾಜು ಮಾತನಾಡಿ, ಮಧುಮೇಹ, ಹೃದ್ರೋಗದಂತಹ ಹಲವು ಕಾಯಿಲೆಗಳನ್ನು ದೂರ ಮಾಡಲು ರಾಗಿ, ನವಣೆ, ಜೋಳದಂತಹ ಮಿಲೆಟ್ಸ್ ಬಳಸಿ. ಹಸಿರು ತರಕಾರಿ ಆರೋಗ್ಯಕ್ಕೆಅವಶ್ಯವಿದೆ. ರುಚಿಯಾಗಿ ಬಗೆಬಗೆಯ ತಿನಿಸುಗಳನ್ನು ಇದರಿಂದ ತಯಾರಿಸಬಹುದು. ಎಲ್ಲರೂ ಕೂಡ ಇಂತಹ ಆಹಾರ ಇಷ್ಟಪಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿರಿಧಾನ್ಯಗಳಿಂದ ಉಪ್ಪಿಟ್ಟು, ಮಾಲ್ಟ್, ಹಲ್ವ, ಬಿಸ್ಕತ್, ಖಾರ, ಸಿಹಿಪೊಂಗಲ್, ಪಾಯಸ, ಕಡುಬು, ಹಪ್ಪಳ, ಚಕ್ಕುಲಿ, ಕೋಡಂಬಳೆ, ಮಿಠಾಯಿ, ರವೆಉಂಡೆ ಮತ್ತಿತರ ಭಕ್ಷಗಳನ್ನು ತಯಾರಿಸಲಾಗಿತ್ತು.

ಒಕ್ಕೂಟದ ಸದಸ್ಯರಾದ ಮೀನಾಕ್ಷಿ, ಮಣಿ, ವಲಯದ ಮೇಲ್ವಿಚಾರಕಿ ಯಶೋಧಾ, ಸೇವಾ ಪ್ರತಿನಿಧಿ ರತ್ನಮ್ಮ, ಗ್ರಾಮ ಮುಖಂಡರು ಹಾಜರಿದ್ದರು.